Home ಜಿಲ್ಲೆ ಬೆಂಗಳೂರು ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಮಾದರಿ ಅಧ್ಯಯನ: ಕ್ರೆಡಲ್‍ಗೆ ಪಂಜಾಬ್ ನಿಯೋಗ

ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಮಾದರಿ ಅಧ್ಯಯನ: ಕ್ರೆಡಲ್‍ಗೆ ಪಂಜಾಬ್ ನಿಯೋಗ

ಬೆಂಗಳೂರು, ನ.20: ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಅನುಷ್ಠಾನ ಮಾದರಿ ಕುರಿತು ಮಾಹಿತಿ ಪಡೆಯಲು ಪಂಜಾಬ್ ರಾಜ್ಯದ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗುರ್‍ಕೀರತ್ ಕಿರ್ಪಾಲ್ ಸಿಂಗ್ ನೇತೃತ್ವದ ನಿಯೋಗವು ಕ್ರೆಡಲ್ ಕಚೇರಿಗೆ ಗುರುವಾರ ಭೇಟಿ ನೀಡಿತು.

ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಮಾದರಿಗಳ ಬಗ್ಗೆ ಕ್ರೆಡಲ್‍ನ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಜಿ.ಆರ್.ಜೆ. ಅವರು ಪಂಜಾಬ್ ನಿಯೋಗಕ್ಕೆ ಮಾಹಿತಿ ನೀಡಿದರು.

ನಿಯೋಗವು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್, ಸೌರಶಕ್ತಿ-ಪ್ಲಸ್-ಸ್ಟೋರೇಜ್ ಮತ್ತು ಹೈಬ್ರಿಡ್ ಮಾದರಿಗಳು ಸೇರಿದಂತೆ ವಿವಿಧ ಮಾದರಿಗಳ ಕಾರ್ಯವೈಖರಿಯ ಮಾಹಿತಿ ಪಡೆದು ಅವುಗಳ ತಾಂತ್ರಿಕ ಹಾಗೂ ವಾಣಿಜ್ಯ ಕಾರ್ಯಸಾಧ್ಯತೆ, ಸರಾಸರಿ ವಿದ್ಯುತ್ ಖರೀದಿ ವೆಚ್ಚ ಮತ್ತು ನಿರ್ವಹಣೆ ಸಾಮಥ್ರ್ಯ ಅದರಲ್ಲೂ ವಿಶೇಷವಾಗಿ ಗರಿಷ್ಠ ಬೇಡಿಕೆಯ ಅವಧಿಯ ಸಾಮಥ್ರ್ಯವನ್ನು ಪರಿಶೀಲಿಸಿತು.

ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಕೈಗೊಂಡಿರುವ ನವೀಕರಿಸಬಹುದಾದ ಇಂಧನ ಯೋಜನೆಗಳ ಬಗ್ಗೆಯೂ ನಿಯೋಗಕ್ಕೆ ವಿವರಣೆ ನೀಡಿದ ದಿವ್ಯಾ ಪ್ರಭು ಅವರು, ಗ್ರಿಡ್ ಸ್ಥಿರತೆಯನ್ನು ಕಾಯ್ದುಕೊಳ್ಳುವ ಜತೆಗೆ ನವೀಕರಿಸಬಹುದಾದ ಇಂಧನ ಬಳಕೆಯ ಕ್ಷಮತೆ ಹೆಚ್ಚಿಸುವಲ್ಲಿ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆಯ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

“ಗ್ರಿಡ್ ಸ್ಥಿರತೆಯನ್ನು ಬಲಪಡಿಸುವ ಮತ್ತು ನವೀಕರಿಸಬಹುದಾದ ಇಂಧನದ ಸಮರ್ಥ ಬಳಕೆಗೆ ಅನಿವಾರ್ಯವಾದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಅಳವಡಿಕೆಗೆ ಕರ್ನಾಟಕ ಬದ್ಧವಾಗಿದೆ. 2027ರ ಸೆಪ್ಟೆಂಬರ್ ವೇಳೆಗೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಯೋಜನೆಗಳ ಅನುಷ್ಠಾನಗೊಳಿಸುವ ಗುರಿ ಹೊಂದಿದ್ದೇವೆ. ಈ ವ್ಯವಸ್ಥೆಯ ತಾಂತ್ರಿಕ ಹಾಗೂ ವಾಣಿಜ್ಯ ಕಾರ್ಯಸಾಧ್ಯತೆ ವಿವರಗಳನ್ನು ಪಂಜಾಬ್ ಜತೆಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ರಾಜ್ಯಗಳ ನಡುವಿನ ಮಾಹಿತಿ ವಿನಿಮಯವು ವಿಕಸಿತಗೊಳ್ಳುತ್ತಿರುವ ದೇಶದ ವಿದ್ಯುತ್ ವಲಯಕ್ಕೆ ಬಲ ತುಂಬಲಿದೆ,” ಎಂದು ದಿವ್ಯಾ ಪ್ರಭು ಹೇಳಿದರು.

“ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್‍ನ ವಿವಿಧ ಮಾದರಿಗಳನ್ನು ಪರಿಶೀಲಿಸುವುದು, ವ್ಯವಸ್ಥೆಯ ಅನುಷ್ಠಾನ ವೆಚ್ಚ, ಸರಾಸರಿ ವಿದ್ಯುತ್ ವೆಚ್ಚ ನಿರ್ಣಯ ಮತ್ತು ಪಂಜಾಬ್‍ನ ವಿದ್ಯುತ್ ಅವಶ್ಯಕತೆಗಳಿಗೆ ಸೂಕ್ತವಾದ ವಿಧಾನವನ್ನು ಗುರುತಿಸುವುದು ಈ ಭೇಟಿಯ ಮೂಲ ಉದ್ದೇಶವಾಗಿತ್ತು. ನವೀಕರಿಸಬಹುದಾದ ಇಂಧನ ಉತ್ಪಾದನೆಯೊಂದಿಗೆ ಶೇಖರಣೆ ವ್ಯವಸ್ಥೆಯನ್ನು ಸಂಯೋಜಿಸುವ ಪ್ರಾಯೋಗಿಕ ಅಂಶಗಳನ್ನು ತಿಳಿದುಕೊಳ್ಳಲು ನಿಯೋಗ ಬಯಸಿತ್ತು” ಎಂದು ಗುರ್‍ಕೀರತ್ ಕಿರ್ಪಾಲ್ ಸಿಂಗ್ ಹೇಳಿದರು.

ಈ ಸಂವಾದದಲ್ಲಿ ಪಂಜಾಬ್ ನಿಯೋಗದ ಜತೆ ರಿನ್ಯೂ ಪವರ್, ಒರಿಯಾನ ಪವರ್ ಮತ್ತು ಪೀಸ್ ಡಿಜಿಟೆಕ್ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕ್ರೆಡಲ್‍ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಮೊದಲು ಪಂಜಾಬ್ ಇಂಧನ ಅಭಿವೃದ್ಧಿ ಸಂಸ್ಥೆಯ ಸಿಇಒ ರಾಹುಲ್, ಮತ್ತು ಇತರ ಹಿರಿಯ ಅಧಿಕಾರಿಗಳು ಪಾವಗಡ ಸೋಲಾರ್ ಪಾರ್ಕ್‍ಗೆ ಭೇಟಿ ನೀಡಿದ್ದರು.