Home ಸಿನೆಮಾ ಎಐ ಲೋಕದ ರಹಸ್ಯ ಬಿಚ್ಚಿಡಲು ಬರುತ್ತಿದೆ ‘ಗರುಡ’

ಎಐ ಲೋಕದ ರಹಸ್ಯ ಬಿಚ್ಚಿಡಲು ಬರುತ್ತಿದೆ ‘ಗರುಡ’

ಸಸ್ಪೆನ್ಸ್–ಥ್ರಿಲ್ಲರ್ ಚಿತ್ರದ ಟ್ರೈಲರ್ ಅನಾವರಣ

ಕೃತಕ ಬುದ್ಧಿಮತ್ತೆ (ಎಐ) ಮಾನವ ಬದುಕಿನ ಭಾಗವಾಗುತ್ತಿರುವ ಈ ಕಾಲಘಟ್ಟದಲ್ಲಿ, ಅದರ ಒಳಿತು–ಕೆಡುಕುಗಳ ಸುತ್ತ ಹೆಣೆಯಲಾದ ಕನ್ನಡದ ಹೊಸ ಪ್ರಯೋಗಾತ್ಮಕ ಚಿತ್ರ ‘ಗರುಡ’ ಇದೀಗ ಟ್ರೈಲರ್ ಮೂಲಕ ಕುತೂಹಲ ಮೂಡಿಸಿದೆ. ಆಕ್ಷನ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳ ಸಂಯೋಜನೆಯಾದ ಈ ಚಿತ್ರವನ್ನು ಶೈವಂ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕಿರಣ್ ಎಸ್. ನಿರ್ಮಿಸಿ, ಕಥೆ–ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಜೊತೆಗೆ ಅವರು ಛಾಯಾಗ್ರಾಹಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಇತ್ತೀಚೆಗೆ ನಡೆದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಭಾಗಿಯಾಗಿ ತಮ್ಮ ಅನುಭವ ಹಂಚಿಕೊಂಡಿತು. ನಿರ್ದೇಶಕ ಕಿರಣ್ ಮಾತನಾಡಿ, “ಮೊದಲು ‘ಪೈಲಟ್’ ಹೆಸರಿನಲ್ಲಿ ಆರಂಭವಾದ ಈ ಪ್ರಾಜೆಕ್ಟ್ ನಂತರ ‘ಗರುಡ’ ಆಗಿ ರೂಪುಗೊಂಡಿತು. ಇದು ನಾನ್-ಲೀನಿಯರ್ ಶೈಲಿಯ ಕಥೆ. ನಾಲ್ಕು ವಿಭಿನ್ನ ಕಥೆಗಳು ಒಂದೇ ಹಂತದಲ್ಲಿ ಸೇರುತ್ತವೆ. ಎಐ ತಂತ್ರಜ್ಞಾನ ಕಥೆಯ ಪ್ರಮುಖ ಅಂಶವಾಗಿದ್ದರೂ, ಚಿತ್ರದ ಆತ್ಮ ಮಾನವೀಯ ಡ್ರಾಮಾದಲ್ಲಿದೆ” ಎಂದರು.

ಅವರು ಮುಂದುವರಿದು, “ನಾಯಕನ ಕನಸಿನ ಪ್ರಾಜೆಕ್ಟ್ ‘ಗರುಡ’. ಅನೇಕ ಅಡೆತಡೆಗಳ ನಡುವೆಯೂ ಆತ ಸಾಧನೆ ಮಾಡುವ ಹಾದಿಯೇ ಚಿತ್ರದ ಹೃದಯ. ಸುಮಾರು 45 ದಿನಗಳ ಕಾಲ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ” ಎಂದು ತಿಳಿಸಿದರು.

ನಾಯಕ ರೀತ್ವಾನ್ ಶ್ರೀನಿವಾಸ್ ಮಾತನಾಡಿ, “ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ಕಥೆಯನ್ನು ಮುಂದೂಡುವ ಪ್ರಮುಖ ಪಾತ್ರ ನನ್ನದು. ತಂತ್ರಜ್ಞಾನ ಮತ್ತು ಅದರ ಪರಿಣಾಮಗಳ ನಡುವೆ ಸಾಗುವ ಪಾತ್ರವಾಗಿ ಕಾಣಿಸಿಕೊಂಡಿದ್ದೇನೆ” ಎಂದರು.

ನಟ ಸೌರವ್ ಪ್ರಶಾಂತ್, “ಪ್ರೇಕ್ಷಕರಿಗೆ ಹೊಸ ರೀತಿಯ ಅನುಭವ ನೀಡುವ ಸಿನಿಮಾ ಇದು. ನನ್ನ ಪಾತ್ರದಲ್ಲಿ ವಿಲನ್ ಹಾಗೂ ಹೀರೋ ಎರಡರ ಶೇಡ್‌ಗಳೂ ಇವೆ” ಎಂದು ಹೇಳಿದರು.

ನಾಯಕಿ ದಿವ್ಯಾಚಂದ್ರ ಮಾತನಾಡಿ, “ಅಪೂರ್ವ ಎಂಬ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರದ ಆರಂಭದಿಂದ ಅಂತ್ಯದವರೆಗೂ ಸಾಗುವ ಪಾತ್ರ ಇದು” ಎಂದರು. ನಟ ವಿವೇಕ್ ಸೇರಿದಂತೆ ಅಭಿಮಹೇಶ್, ಅಭಿಷೇಕ್ ಹಾಗೂ ಕಿರಣ್ ಕೂಡ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದರು.

‘ಗರುಡ’ ಚಿತ್ರಕ್ಕೆ ಸಂತೋಷ್ ಜೋಶ್ವಾ ಸಂಗೀತ ಸಂಯೋಜನೆ ನೀಡಿದ್ದು, ವಿನಯ್ ಪ್ರಭಾಕರ್, ವಿಲ್ ಫ್ರೆಡ್, ಸೌಭಾಗ್ಯ ಹಂದ್ರಾಳ್, ದಿಲೀಪ್ ಕುಮಾರ್ ಹಾಗೂ ಬಾಹುಬಲಿ ಮಂಜು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜೂನ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.