Home ಜಿಲ್ಲೆ ಮಂಗಳೂರು ಆ. ೧೯; ಪುತ್ತೂರು ಎಜು-ಪಾರ್ಕ್ ದಾರುಲ್ ಹಸನಿಯಾ ಅಕಾಡೆಮಿಯ ನೂತನ ಕಾಲೇಜು ಕಟ್ಟಡ ಉದ್ಘಾಟನೆ

ಆ. ೧೯; ಪುತ್ತೂರು ಎಜು-ಪಾರ್ಕ್ ದಾರುಲ್ ಹಸನಿಯಾ ಅಕಾಡೆಮಿಯ ನೂತನ ಕಾಲೇಜು ಕಟ್ಟಡ ಉದ್ಘಾಟನೆ

ಪುತ್ತೂರು: ಪುತ್ತೂರಿನ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಸಮನ್ವಯ ವಿದ್ಯಾಸಂಸ್ಥೆಯಾದ ದಾರುಲ್ ಹಸನಿಯಾ ಅಕಾಡೆಮಿ ಎಜು-ಪಾರ್ಕ್, ಪುತ್ತೂರು ಇದರ ನೂತನ ಕಾಲೇಜು ಕಟ್ಟಡದ ಉದ್ಘಾಟನಾ ಸಮಾರಂಭವು ಆ. ೧೯ರಂದು ನಡೆಯಲಿದೆ. ‘ಸಮಸ್ತ’ದ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೂತನ ಕಾಲೇಜು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕುಂಬೋಳ್ ಸಯ್ಯಿದ್ ಅಲಿ ತಂಙಳ್ ದುವಾಆಶೀರ್ವಚನ ನೀಡಲಿದ್ದಾರೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಫಾರೂಕ್ ಹಾಜಿ ಪೋರ್ಟ್‌ವೆ ತಿಳಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ ದಾರುಲ್ ಹಸನಿಯಾ ಅಕಾಡೆಮಿಯು ಪವಿತ್ರ ಕುರ್‌ಆನ್ ಕಂಠಪಾಠದೊಂದಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಸಮನ್ವಯಗೊಳಿಸಿ, ವಿದ್ಯಾರ್ಥಿಗಳನ್ನು ಸಮರ್ಥ ಹಾಗೂ ಪ್ರತಿಭಾವಂತ ವಿದ್ವಾಂಸರನ್ನಾಗಿ ರೂಪಿಸುವ ಉದ್ದೇಶದಿಂದ ೨೦೧೯ರಲ್ಲಿ ಕೇವಲ ೧೮ ವಿದ್ಯಾರ್ಥಿಗಳೊಂದಿಗೆ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗಿತ್ತು. ಪ್ರಸ್ತುತ ಸಂಸ್ಥೆಯಲ್ಲಿ ಹಿಫ್ಲುಲ್ ಕುರ್‌ಆನ್ ಜೊತೆಗೆ ’ಸಮಸ್ತ’ದ ಪ್ರತಿಷ್ಠಿತ ‘ಸಮಸ್ತ ನ್ಯಾಷನಲ್ ಎಜುಕೇಶನ್ ಕೌನ್ಸಿಲ್ (ಎಸ್.ಎನ್.ಇ.ಸಿ.) ಪಠ್ಯ ಕ್ರಮದ ಅಡಿಯಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಮನ್ವಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈಗಾಗಲೇ ೩೦ ವಿದ್ಯಾರ್ಥಿಗಳು ಪವಿತ್ರ ಕುರ್‌ಆನ್ ಸಂಪೂರ್ಣವಾಗಿ ಕಂಠಪಾಠ ಮಾಡಿ ಹಾಫಿಳ್‌ಗಳಾಗಿ ಹೊರಹೊಮ್ಮಿದ್ದಾರೆ. ಇದೀಗ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ನಾಲ್ಕು ಅಂತಸ್ತಿನ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಸುಸಜ್ಜಿತ ನೂತನ ಕಾಲೇಜು ಕಟ್ಟಡ ನಿರ್ಮಿಸಲಾಗಿದೆ.
ಉದ್ಘಾಟನೆಯ ಸಂದರ್ಭದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ‘ಸಮಸ್ತ” ಕೇಂದ್ರೀಯ ನಾಯಕ ಶೈಖುನಾ ಎಂ.ಟಿ. ಉಸ್ತಾದ್, ಶೈಖುನಾ ಕೊಯ್ಯೋಡ್ ಉಸ್ತಾದ್, ಅಬ್ದುಲ್ ಸಲಾಂ ಬಾಖವಿ ಸೇರಿದಂತೆ ‘ಸಮಸ್ತ’ ಕೇಂದ್ರ ಮುಶಾವರದ ಸದಸ್ಯರು, ಎಸ್‌ಕೆಎಸ್‌ಎಸ್‌ಎಫ್ ಕೇಂದ್ರೀಯ ನಾಯಕರಾದ ಪಾಣಕ್ಕಾಡ್ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್, ಸತ್ತಾರ್ ಪಂದಲ್ಲೂರು, ಸಚಿವರಾದ ಯು.ಟಿ. ಖಾದರ್, ಝಮೀರ್ ಅಹ್ಮದ್, ರಿಝ್ವಾನ್ ಅರ್ಶದ್, ದ.ಕ. ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಅಶೋಕ್ ಕುಮಾರ್ ರೈ, ರಹ್ಮಾನ್ ಖಾನ್, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಕಾಸರಗೋಡು ಶಾಸಕ ಮಾಹಿನ್ ಹಾಜಿ ಕಲ್ಲಟ್ರ, ಮಾಜಿ ಶಾಸಕರಾದ ರಮಾನಾಥ ರೈ, ಸಂಜೀವ ಮಠಂದೂರು ಸೇರಿದಂತೆ ಸಾಮಾಜಿಕ ಮುಖಂಡರಾದ ಝಕರಿಯಾ ಹಾಜಿ ಜೋಕಟ್ಟೆ, ಶರೀಫ್ ಹಾಜಿ ವೈಟ್ ಸ್ಟೋನ್, ಇನಾಯತ್ ಅಲಿ ಮುಲ್ಕಿ, ಯು.ಟಿ. ಇಫ್ತಿಕಾರ್, ಮುಸ್ತಫಾ ಭಾರತ್ ಮೊದಲಾದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಪ್ರಮುಖರು ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
೩೧೩ ಮಂದಿಯ ಸ್ವಾಗತ ಸಮಿತಿ;
ಕಾರ್ಯಕ್ರಮದ ಯಶಸ್ವಿಗಾಗಿ ಈಗಾಗಲೇ ೩೧೩ ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಶಿಸ್ತುಬದ್ಧವಾಗಿ ಕಾರ್ಯಕ್ರಮವನ್ನು ನಡೆಸಲು ಅಗತ್ಯವಿರುವ ಎಲ್ಲಾ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿದ್ದು, ನೂತನ ಕಾಲೇಜು ಕಟ್ಟಡ ಹಾಗೂ ಸಭಾಂಗಣವು ಕಾರ್ಯಕ್ರಮಕ್ಕಾಗಿ ಸುಂದರವಾಗಿ ಸಜ್ಜುಗೊಂಡಿದೆ. ಸುಮಾರು ೫,೦೦೦ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕ ಅನ್ನದಾನವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ಧಿಗೋಷ್ಟಿಯಲ್ಲಿ ದಾರುಲ್ ಹಸನಿಯಾ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ದಾರುಲ್ ಹಸನಿಯಾ ಜುಬೈಲ್ ಘಟಕದ ಪೋಷಕ ಆಸಿಫ್ ಹಾಜಿ ದರ್ಬೆ, ಆಡಳಿತ ಸಮಿತಿ ಸದಸ್ಯರಾದ ಮಹಮ್ಮದ್ ರಿಯಾಝ್ ಕೆ, ಅನ್ವರ್ ಮುಸ್ಲಿಯಾರ್ ಮತ್ತು ಉಮ್ಮರ್ ಹಾಜಿ ಸಂಪ್ಯ ಉಪಸ್ಥಿತರಿದ್ದರು.