
ನ.20ಕ್ಕೆ ಗಣೇಶ್ ಸಿನಿಮಾ ತೆರೆಗೆ!
ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿ ಪ್ರೀ-ರಿಲೀಸ್ ಕಾರ್ಯಕ್ರಮ
ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಚಿತ್ರದ ಪ್ರೀ-ರಿಲೀಸ್ ಸಂಭ್ರಮ ಅದ್ದೂರಿಯಾಗಿ ನಡೆಯಿತು. ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಮೊದಲು ಅಕ್ಟೋಬರ್ 16ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಇದೀಗ ನವೆಂಬರ್ 20ರಂದು ತೆರೆಗೆ ಬರಲಿದೆ.
ಕೆವಿಸಿ ಪ್ರೊಡಕ್ಷನ್ ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮೃದ್ಧಿ ವಿ. ಮಂಜುನಾಥ್ ನಿರ್ಮಿಸಿರುವ ಈ ಚಿತ್ರಕ್ಕೆ ಶ್ರೀನಿವಾಸರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗಣೇಶ್ಗೆ ನಾಯಕಿಯಾಗಿ ಮಾಳವಿಕಾ ಶರ್ಮ ಹಾಗೂ ದೇವಿಕಾ ಭಟ್ ನಟಿಸಿದ್ದಾರೆ.
ಕಾರ್ಯಕ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಜಗಪ್ಪ, ಸುಶ್ಮಿತಾ, ಬಿಗ್ಬಾಸ್ ವಿಜೇತರಾದ ಗಿಲ್ಲಿ ನಟ ಹಾಗೂ ಮಂಜು ಪಾವಗಡ ಅವರ ಹಾಸ್ಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ಚಿತ್ರದ ಹಾಡುಗಳಿಗೆ ಕಲಾವಿದರು ನೀಡಿದ ನೃತ್ಯ ಪ್ರದರ್ಶನ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಮಾತನಾಡಿ, “ಉತ್ತರ ಕರ್ನಾಟಕದ ಜನತೆ ಕನ್ನಡ ಚಿತ್ರಗಳಿಗೆ ಸದಾ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಅದೇ ಪ್ರೀತಿ, ಬೆಂಬಲವನ್ನು ನಮ್ಮ ‘ಬೃಂದಾವಿಹಾರಿ’ ಚಿತ್ರಕ್ಕೂ ನೀಡಬೇಕು. ‘ಪ್ರೇಮದ ಊರಲಿ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಚಿತ್ರದ ಬಿಡುಗಡೆಯನ್ನು ಅಕ್ಟೋಬರ್ 16ರಿಂದ ನವೆಂಬರ್ 20ಕ್ಕೆ ಮುಂದೂಡಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ” ಎಂದು ಮನವಿ ಮಾಡಿದರು. ವೇದಿಕೆಯಲ್ಲಿದ್ದ ಶಾಸಕರಾದ ಪ್ರಸಾದ್ ಅಬ್ಬಯ್ಯ, ರಾಜುಗೌಡ ಹಾಗೂ ಅರವಿಂದ ಬೆಲ್ಲದ್ ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಾಯಕ ಗಣೇಶ್ ತಮ್ಮದೇ ಶೈಲಿಯಲ್ಲಿ ಹುಬ್ಬಳ್ಳಿ ಜನತೆಗೆ ನಮಸ್ಕರಿಸಿ, ಚಿತ್ರವನ್ನು ಬೆಂಬಲಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಹಿರಿಯ ನಟ ರಂಗಾಯಣ ರಘು, ಮತ್ತೊಂದು ಚಿತ್ರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಬಿಡುಗಡೆಯನ್ನು ಮುಂದೂಡಿದ ನಿರ್ಮಾಪಕ ಮಂಜುನಾಥ್ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, ಗಣೇಶ್ ಅವರು ತಮ್ಮ ಚಿತ್ರಗಳನ್ನು ವೀಕ್ಷಿಸಿ ಪ್ರೋತ್ಸಾಹಿಸುತ್ತಾರೆ. ಕೌಟುಂಬಿಕ ಕಥಾಹಂದರದ ಚಿತ್ರಗಳು ತಮಗೆ ಇಷ್ಟವಾಗುವ ಜಾನರ್ ಆಗಿದ್ದು, ‘ಬೃಂದಾವಿಹಾರಿ’ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಹಾಡು, ಹಾಸ್ಯ, ತಾರೆಯರ ಮಾತು ಹಾಗೂ ಅಭಿಮಾನಿಗಳ ಉತ್ಸಾಹದೊಂದಿಗೆ ನಡೆದ ಈ ಕಾರ್ಯಕ್ರಮ, ಬಿಡುಗಡೆಯ ನಿರೀಕ್ಷೆಯಲ್ಲಿರುವ ‘ಬೃಂದಾವಿಹಾರಿ’ ಚಿತ್ರಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರದ ಹೊಸ ವೇದಿಕೆಯಾಯಿತು.























