Home ಜಿಲ್ಲೆ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ರಾಜ್ಯ ರೈತ ಸಂಘ ವಿರೋಧ

ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ರಾಜ್ಯ ರೈತ ಸಂಘ ವಿರೋಧ

ಸಂಜೆವಾಣಿ ವಾರ್ತೆ

ಹೊಸಪೇಟೆ.ಅ.21 ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಡಣಾಯಕನಕೆರೆ ಕಂದಾಯ ಗ್ರಾಮದ ಸರ್ವೆ ನಂ 572 ರ ವ್ಯಾಪ್ತಿಯಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ಕರ್ನಾಟಕ ರಾಜ್ಯ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸ್ಥಳೀಯ ರೈತರು ತಹಶೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರು ಅವರಿಗೆ ಮನವಿಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ, ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಡಣಾಯಕನಕೆರೆ ಕಂದಾಯ ಗ್ರಾಮದ ಸರ್ವೆ ನಂ 572 ರ ವ್ಯಾಪ್ತಿಯಲ್ಲಿ ಕಳೆದ 73 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಈವರೆಗೆ ಸರ್ಕಾರ ಹಕ್ಕು ಪತ್ರಗಳನ್ನು ನೀಡಿರುವುದಿಲ್ಲ. 1959 ರಲ್ಲಿ ತುಂಗಭದ್ರಾ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಮುಳುಗಡೆಯಾದ ಪ್ರದೇಶಗಳ ನಿರಾಶ್ರಿತರಿಗೆ ಸರ್ಕಾರ ಪುನರ್ವಸತಿಗಾಗಿ ಈ ಪ್ರದೇಶದಲ್ಲಿ ಭೂಮಿಯನ್ನು ನೀಡಿರುತ್ತದೆ. ಆದರೆ ಸರ್ಕಾರದ ವತಿಯಿಂದ ನೀಡಲಾದ ಜಮೀನುಗಳಿಗೆ ಈವರೆಗೆ ಹಕ್ಕು ಪತ್ರಗಳನ್ನು ನೀಡಿಲ್ಲ.

ಈ ಕುರಿತಂತೆ ಈ ಭಾಗದ ರೈತರು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅಲ್ಲದೆ ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳಿಗೆ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರೂ ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಹಕ್ಕುಪತ್ರ ನೀಡಿರುವುದಿಲ್ಲ.

ಆದರೆ ಇದೇ ಸಂದರ್ಭದಲ್ಲಿ ಸದರಿ ಸರ್ವೆ ನಂ ಜಾಗದಲ್ಲಿ ಕರ್ನಾಟಕ ಬಂಗಾರು ಶುಗರ್ಸ್ ಪ್ರವೈಟ್ ಲಿಮಿಟೆಡ್ ಕಂಪನಿಯವರು ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ್ದು. ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಪರವಾನಿಗೆ ನೀಡಬಾರದು ಎಂದು ಒತ್ತಾಯಿಸಿದರು.

ಅಲ್ಲದೆ ತುಂಗಭದ್ರಾ ನಿರಾಶ್ರಿತರ ಜಮೀನುಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ, ತಾಲೂಕಿನ ಡಣಾಪುರ ಬಳಿ ರಾಜ್ಯ ರೈತ ಸಂಘದ ನೇತೃತ್ವzಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಈ ಸಂದರ್ಭದಲ್ಲಿ ರೈತರಿಗೆ ಎನಾದರೂ ತೊಂದರೆ ಆದರೆ ಅದಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಸರ್ಕಾರವನ್ನು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ್, ರೈತರಾದ ಯಮುನೂರ, ರಾಜಬಕ್ಷಿ, ಹುಚ್ಚುಸಾಬ್, ಕನಕರಾಯ,  ಹುಲುಗಪ್ಪ, ಉಮೇಶ, ಮಾರೆಪ್ಪ, ರಮೇಶ, ದಾದಾಪೀರ್, ನಾಗರಾಜ, ರಾಮಪ್ಪ ಸೇರಿದಂತೆ ಮತ್ತಿತರರು ಇದ್ದರು.