Home ಜಿಲ್ಲೆ ಬಳ್ಳಾರಿ ಮೆಗಾ ಡೈರಿ ಯೋಜನೆಗೆ ವಿರೋಧ ವಿಜಯನಗರದಲ್ಲಾಗಬೇಕೆಂಬುದು ನನ್ನ ಪ್ರಯತ್ನ: ಮರುಳಸಿದ್ದಪ್ಪ ಉವಾಚ

ಬಳ್ಳಾರಿ ಮೆಗಾ ಡೈರಿ ಯೋಜನೆಗೆ ವಿರೋಧ ವಿಜಯನಗರದಲ್ಲಾಗಬೇಕೆಂಬುದು ನನ್ನ ಪ್ರಯತ್ನ: ಮರುಳಸಿದ್ದಪ್ಪ ಉವಾಚ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಅ.21:  ತಾಲೂಕಿನ ಕೊಳಗಲ್ಲು ಬಳಿ  ಮೆಗಾ ಡೈರಿ ರಾಬಕೊವಿ ಹಾಲು ಒಕ್ಕೂಟದಿಂದ ಸ್ಥಾಪಿಸಲು ಅಗತ್ಯವಾದ ಜಮೀನನ್ನು ಸರ್ಕಾರದಿಂದ ಪಡೆಯಲಾಗಿದೆ. ಅಂದಾಜು 150 ಕೋಟಿ ರೂ ವೆಚ್ಚದಿಂದ ನಿರ್ಮಿಸುವ ಈ ಡೈರಿಗೆ ಕೆಎಂಇಆರ್ ಸಿ ಯಿಂದ ಅನುದಾನ ನೀಡುತ್ತಿದೆ. ಇದನ್ನು ಕೆಎಂಎಫ್ ನಿಂದ ಟೆಂಡರ್ ಕರೆಯಬೇಕೆಂಬ ಚಿಂತನೆ ಇತ್ತು. ಆದರೆ ನೀವು ಸರಿಯಾಗಿ ಮಾಡಲ್ಲ ಎಂದು ಕೆ.ಎಂ.ಇ.ಆರ್.ಸಿ ಇದಕ್ಕೆ ಒಪ್ಪದೆ ರಾಷ್ಟ್ರೀಯ ಹೈನುಗಾರಿಕೆ  ಅಭಿವೃದ್ಧಿ ಮಂಡಳಿ(ಎನ್.ಡಿ.ಡಿ.ಬಿ)ಗೆ ನೀಡಿದೆ. ಅದಕ್ಕೆ ಇಲ್ಲಿನ ಒಕ್ಕೂಟ ಸಮ್ಮತಿ ಪತ್ರ ನೀಡುವುದು ವಿಳಂಬ ಮಾಡಿದ್ದರಿಂದ ಇದರ ಕಾಮಗಾರಿ ಈ ವರೆಗೆ ಆರಂಭಗೊಂಡಿಲ್ಲ. ಇತ್ತೀಚೆಗೆ ಸಮ್ಮತಿಪತ್ರ ನೀಡಿರುವುದರಿಂದ ಸಧ್ಯದಲ್ಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ.

ಆದರೆ ಬಳ್ಳಾರಿಯಲ್ಲಿ ಮೆಗಾ ಡೈರಿ ಮಾಡುವುದನ್ನು ನಾನು ವಿರೋಧಿಸುವೆ ಎಂದಿರುವ ವಿಜಯನಗರ ಜಿಲ್ಲೆಯ ಒಕ್ಕೂಟದ ನಿರ್ದೇಶಕ ಮರುಳ ಸಿದ್ದಪ್ಪ ಸಭೆಯೊಂದರಲ್ಲಿ ಹೇಳಿರುವ ವಿಡಿಯೋ ಈಗ ಹರಿದಾಡತೊಡಗಿದೆ.

ಆ ವಿಡಿಯೋದಲ್ಲಿಬಳ್ಳಾರಿಯಲ್ಲಿ ಮೆಗಾ ಡೈರಿ ಸ್ಥಾಪನೆ ಮಾಡಬೇಕೆಂಬುದು ನನ್ನ ಯೋಜನೆಯಾಗಿತ್ತು. ಆದರೆ ಈಗ ಅದಕ್ಕೆ ನನ್ನ ವಿರೋಧವಿದೆ. ವಿಜಯನಗರದಲ್ಲಿ ಮೆಗಾ ಡೈರಿ ಆಗಬೇಕೆಂಬುದು ನನ್ನ ಪ್ರಯತ್ನ ಮುಂದುವರೆದಿದೆ ಎಂದು ರಾಬಕೊವಿ ಹಾಲು ಒಕ್ಕೂಟದ ನಿರ್ದೇಶಕ ಮರುಳ ಸಿದ್ದಪ್ಪ ಹಾಲು ಉತ್ಪಾದಕರಿಗೆ ಹೇಳಿದ್ದಾರೆ.

ಈ ಕುರಿತು ಅವರು ಜಮೀನು ಒಂದರಲ್ಲಿ ಹಾಲು ಉತ್ಪಾದಕರ ಸಭೆಯಲ್ಲಿ ಮಾತನಾಡಿರುವ ವಿಡಿಯೋ  ಈಗ ಸಂಜೆವಾಣಿಗೆ ಲಭ್ಯವಾಗಿದೆ.

ಅದರಲ್ಲಿ, ಬಳ್ಳಾರಿಯಲ್ಲಿ ಮೆಗಾ ಡೈರಿ  ಸ್ಥಾಪನೆಗೆ ರೂಪಿಸಿರುವ  ಯೋಜನೆಯಿಂದ ಒಕ್ಕೂಟಕ್ಕೆ ಭಾರಿ ಆರ್ಥಿಕ ಹೊರೆ ಎದುರಾಗಲಿದೆ ಈ ಹಿನ್ನೆಲೆಯಲ್ಲಿ ನಾನು ನನ್ನ ನಿಲುವನ್ನು ಬದಲಿಸಿ ವಿಜಯನಗರದಲ್ಲಿ ಕಡಿಮೆ ವೆಚ್ಚದಲ್ಲಿ ಡೈರಿ ಸ್ಥಾಪಿಸುವ ಹೊಸ ಯೋಜನೆಗೆ ಮಾತುಕತೆ ನಡೆಸಿರುವೆ ಎಂದಿದ್ದಾರೆ.

ಈ ಮೊದಲು ನಾನು ಬಳ್ಳಾರಿಯಲ್ಲಿಯೇ ಮೆಗಾ ಡೈರಿ ಮಾಡಬೇಕೆಂಬ ಉದ್ದೇಶದಿಂದ  ಮಾಜಿ ಶಾಸಕ ಜಿ ಸೋಮಶೇಖರ ರೆಡ್ಡಿ ಅವರನ್ನು ಒಕ್ಕೂಟಕ್ಕೆ ಕರೆದುಕೊಂಡು ಬಂದಿದ್ದು. ಅವರು ಕೆಎಂಎಫ್ ಅಧ್ಯಕ್ಷರೂ ಆದರು.ಆಗ ಬರಿ 35 ಕೋಟಿ ಪ್ರಾಜೆಕ್ಟ್ ಅದಾಗಿತ್ತು. ಆದರೆ ಅವರಿಂದ ಮೆಗಾ ಡೈರಿ ಮಾಡಲಾಗಲಿಲ್ಲ.

ಕ್ಯಾಟಲ್ ಪುಡ್ ಕಾರ್ಖಾನೆ ಮಾಡಲು ಹೇಳಿತ್ತು ಅದೂ  ಆಗಲಿಲ್ಲ. ಆದರೆ ಅವರು ಐಸ್ ಕ್ರೀಂ ಪ್ಯಾಕ್ಟರಿ ಮಾಡಿದರು. ಹೊಸಪೇಟೆಯಲ್ಲಿ  300 ಟನ್

ಕ್ಯಾಟಲ್ ಪುಡ್ ಪ್ಯಾಕ್ಟರಿ ಆಗಿದೆ.

ನಂತರ ರವೀಂದ್ರ ಅವರು ಬಂದರು ಅವರು ಸಹ ಮೆಗಾ ಡೈರಿ ಸ್ಥಾಪನೆಗೆ ಪ್ರಯತ್ನ ಮಾಡಿದರು. ಆಗಲೂ ಆಗಲಿಲ್ಲ. ನನಗೆ ಆ ಕೊರಗು ಹಾಗೆ ಉಳಿದಿತ್ತು.

 ಬೂದಗುಪ್ಪದಲ್ಲಿ 55 ಕೋಟಿ ವೆಚ್ಚದಲ್ಲಿ ಡೈರಿ ನಿರ್ಮಾಣವಾದ ಹಿನ್ನೆಲೆಯಲ್ಲಿ, ಬಳ್ಳಾರಿಯಲ್ಲಿಯೂ ಡೈರಿ ಸ್ಥಾಪಿಸಬೇಕೆಂಬ ಉದ್ದೇಶದಿಂದ  ಜಮೀನು ಇಲ್ಲದಿದ್ದರೂ ನಾನು ಪ್ರಯತ್ನ ಮಾಡಿ.ರಾಷ್ಟ್ರೀಯ ಡೈರಿ ಅಭಿವೃದ್ಧಿ

 ಮಂಡಳಿ (ಎನ್ಡಿಡಿಬಿ) ಸಂಪರ್ಕಿಸಿ 108 ಕೋಟಿ ವೆಚ್ಚದ ಯೋಜನೆಗೆ ಅನುಮತಿ ಪಡೆದುಕೊಂಡಿದ್ದೆ. ಇದಕ್ಕೆ ಸಾಲ ಮಂಜೂರಾತಿಯೂ ದೊರೆತಿತ್ತು. ಆದರೆ, ಸ್ಥಳೀಯವಾಗಿ ಜಮೀನು ಲಭ್ಯವಾಗದ ಕಾರಣ ಯೋಜನೆ ಮುಂದುವರಿಯಲಿಲ್ಲ.

ನಂತರ ಕೆಎಂಎಫ್ ಮೂಲಕ ವೈಯಕ್ತಿಕ ಪ್ರಯತ್ನ ನಡೆಸಿ 88 ಕೋಟಿ ಅನುದಾನ ಮಂಜೂರು ಮಾಡಿಸಿಕೊಳ್ಳಲಾಗಿತ್ತು. ಬಳ್ಳಾರಿ ಜಿಲ್ಲೆಯ ಕೊಳಗಲ್ಲು ಪ್ರದೇಶದಲ್ಲಿ 15 ಎಕರೆ ಜಮೀನು ಮಂಜೂರಾಗಿದ್ದು, ಡೈರಿ ನಿರ್ಮಾಣಕ್ಕೆ ಅಗತ್ಯವಾದ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿವೆ. ಈ ಯೋಜನೆಗೆ ಸಂಬಂಧಿಸಿದ ಅನುದಾನ ಮಂಜೂರಾತಿ ಪತ್ರ ಮತ್ತು ಜಮೀನು ಮಂಜೂರಾತಿ ಪತ್ರ ತಮ್ಮ ಬಳಿ ಇರುವುದಾಗಿ ಹೇಳುತ್ತಾರೆ.

ಆದರೆ ಈಗ ಬಳ್ಳಾರಿಯ ಜನ ಸಹಕಾರ ಇಲ್ಲ. ನಾನು ಮಾಡುವ ಪ್ರಯತ್ನಕ್ಕೆಲ್ಲ ಅಡ್ಡಿಯಾಗುತ್ತಿದ್ದಾರೆ. ಅದಕ್ಕಾಗಿ ನನ್ನಮನಸ್ಸು ಬದಲಿಸಿ ವಿಜಯನಗರ ಜಿಲ್ಲೆಯಲ್ಲಿ ಮೆಗಾ ಡೈರಿ ಮಾಡುವ ಸಂಕಲ್ಪಮಾಡಿದೆ.

ಅದೂ ಯಾಕೆಂದರೆ.  ಎನ್ಡಿಡಿಬಿ ಸಹಯೋಗದೊಂದಿಗೆ ಬಳ್ಳಾರಿಯಲ್ಲಿ ಡೈರಿ ನಿರ್ಮಿಸಿದರೆ ಸುಮಾರು 70 ಕೋಟಿ ಸಾಲದ ಹೊರೆ ಬೀಳಲಿದೆ ಒಕ್ಕೂಟಕ್ಕೆ.

ಅದಕ್ಕಾಗಿ ಹೈದರಾಬಾದ್ ಮಾದರಿಯಂತೆ, ಆಂಧ್ರಪ್ರದೇಶದ ಗುತ್ತಿಗೆದಾರರು ಮತ್ತು ಎಂಜಿನಿಯರ್ಗಳೊಂದಿಗೆ ಚರ್ಚಿಸಿ ಸುಮಾರು 40ರಿಂದ 45 ಕೋಟಿ ವೆಚ್ಚದಲ್ಲಿ ದಿನಕ್ಕೆ 2 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸಾಮರ್ಥ್ಯದ ಡೈರಿ ನಿರ್ಮಿಸಲು ಚಿಂತಿಸಲಾಗಿದೆ.

ಇದಕ್ಕೆ ಕೆಎಂಎಫ್ನಿಂದ ₹20 ಕೋಟಿ ಬಡ್ಡಿರಹಿತ ಸಾಲಕ್ಕೆ ಒಪ್ಪಿಗೆ ಪಡೆಯಲಾಗಿದೆ. ಒಕ್ಕೂಟದಲ್ಲಿರುವ ಸುಮಾರು 16 ಕೋಟಿ ಸ್ಥಿರ ಠೇವಣಿ ಹಾಗೂ ಇಂತಹ ಇತರ ಮೂಲಗಳನ್ನು ಬಳಸಿ ಸುಮಾರು 50 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಅಧಿಕ ಸಾಲದ ಹೊರೆ ಹೊರುವ ಬದಲು, ಆರ್ಥಿಕ ಹಿತದೃಷ್ಟಿಯಿಂದ ವಿಜಯನಗರದಲ್ಲಿ ಕಡಿಮೆ ವೆಚ್ಚದಲ್ಲಿ ಡೈರಿ ಸ್ಥಾಪಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ ಹೇಳುತ್ತಾರೆ ಮರುಳ ಸಿದ್ದಪ್ಪ ತಮ್ಮ ಭಾಷಣದಲ್ಲಿ.

ಇತ್ತಿಗೆ ಬಳ್ಳಾರಿ ಕೆಎಂಎಪ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ನಾನು ಎಂದೂ ಒಕ್ಕೂಟಕ್ಕೆ ಕೆಟ್ಟದ್ದನ್ನು ಮಾಡಿಲ್ಲ, ಬಯಸಿಲ್ಲ. ಇದರ ಅಭಿವೃದ್ಧಿಗಾಗಿ ಜೀವನ ಸವೆಸಿರುವೆ ಎಂದಿದ್ದರು. ಆದರೆ ಅವರು ಬಳ್ಳಾರಿ ಬಗ್ಗೆ ಹೊಂದಿರುವ ಮಲತಾಯಿ ಧೋರಣೆ ಏನೆಂಬುದನ್ನು ಇದು ತೋರಿಸಿದೆ.

ಕೆಎಂಎಪ್ ನ ಯಾವುದೇ ಹಗರಣದ ಮಾತುಗಳು ಯಾವಾಗಲೂ ಅವರ ಸುತ್ತ ಸುತ್ತಿರುತ್ತವೆ. ಯಾಕೆ ಎಂದು ಹುಡುಕಿದಾರೆ ಅವರ ಈ ಮಾತುಗಳು ಕಾರಣ ಇರಬಹುದು.

ಅವರು ಹೀಗೆ ಎಲ್ಲಿ ಮಾತನಾಡಿದ್ದಾರೆ. ಯಾವಾಗ ಮಾತನಾಡಿದ್ದಾರೆ ಇದರ ಹಿಂದಿನ ಹಕೀಕತ್ ಬಗ್ಗೆ ಬಳ್ಳಾರಿ ಜಿಲ್ಲೆಯ ಜನತೆಗೆ ತಿಳಿಯಬೇಕಿದೆ.