Home ಜಿಲ್ಲೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಮುದಾಯದ ಸಹಭಾಗಿತ್ವ ಅಗತ್ಯ-ಕೋರಿಶೆಟ್ಟಿ ಲಿಂಗಪ್ಪ

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಮುದಾಯದ ಸಹಭಾಗಿತ್ವ ಅಗತ್ಯ-ಕೋರಿಶೆಟ್ಟಿ ಲಿಂಗಪ್ಪ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜೂ.14 ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪಾಲಕ-ಪೋಷಕರು ಸೇರಿದಂತೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ವೀರಶೈವ ಸಮಾಜದ ಮುಖಂಡರು ಹಾಗೂ ಸಮಾಜ ಸೇವಕರಾದ ಕೋರಿ ಶೆಟ್ಟಿ ಲಿಂಗಪ್ಪ ಹೇಳಿದರು.

ತಾಲೂಕಿನ ಕಾಕುಬಾಳು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಉಚಿತ ನೋಟ್ ಪುಸ್ತಕಗಳ ವಿತರಣಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈ ಜೀವ ಜಗತ್ತಿನಲ್ಲಿ ಹುಟ್ಟು ಸಾವು ಎಲ್ಲದರಲ್ಲೂ ಇದೆ ಆದರೆ ಬದುಕಿನ ಶ್ರೇಷ್ಠತೆಯನ್ನು ನಾವು ಇಂದು ಕಂಡು ಕೊಳ್ಳಬೇಕಾಗಿದೆ. ಸರ್ಕಾರದ ಸೌಲಭ್ಯಗಳ ಜೊತೆಗೆ ಪ್ರತಿಯೊಬ್ಬರು ಶಾಲೆಗಳ ಪ್ರಗತಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ದಾರಿ ದೀಪವಾಗಬೇಕು ಎಂದರು.

ಅಲ್ದದೆ ಕಳೆದ 14 ವರ್ಷಗಳಿಂದ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಣೆ ಮಾಡುತ್ತಾ ಬಂದಿರುವ ದಾನಿಗಳು, ಸಮಾಜ ಸೇವಕರು ಹಾಗೂ ಎಂ.ಎಸ್.ಪಿ.ಎಲ್ ಸಂಸ್ಥೆಯ ನಿರ್ದೇಶಕರಾದ ಹೆಚ್.ಎಂ.ಸಿದ್ದಲಿಂಗಯ್ಯ ಸ್ವಾಮಿ ಅವರ ಸೇವೆಯನ್ನು ಶ್ಲಾಘಿಸಿದರು.

ಉಚಿತ ನೋಟ್ ಪುಸ್ತಕಗಳ ವಿತರಣೆ ಮಾಡಿ ಮಾತನಾಡಿದ, ದಾನಿಗಳು ಹಾಗೂ ಎಂ.ಎಸ್.ಪಿ.ಎಲ್ ಸಂಸ್ಥೆಯ ನಿರ್ದೇಶಕ ಹೆಚ್.ಎಂ.ಸಿದ್ದಲಿಂಗಯ್ಯ ಸ್ವಾಮಿ ಅವರು, ಹಿರಿಯರು ಮಾಡಿದ ದಾನ ಧರ್ಮಗಳಿಂದ ನಾವು ಇಂದು ಉನ್ನತ ಮಟ್ಟಕ್ಕೆ ಬೆಳೆದಿದ್ದೇವೆ. ಎಲ್ಲವೂ ನನಗೆ ಇರಲಿ ಎನ್ನುವ ಮನುಜ ಕುಬ್ಜನಾಗುತ್ತಾನೆ. ತ್ಯಾಗದ ಮನೋಭಾವದಿಂದ ವ್ಯಕ್ತಿ ದೊಡ್ಡವನಾಗುತ್ತಾನೆ. ನಮ್ಮ ತಂದೆ-ತಾಯಿಗಳ ಸ್ಮರಣಾರ್ಥ ಕಳೆದ 14 ವರ್ಷಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಉಚಿತ ನೋಟ್ ಬುಕ್ ವಿತರಿಸುವ ಕಾರ್ಯವನ್ನು ಪ್ರತಿ ವರ್ಷ ಮಾಡಿಕೊಂಡು ಬರುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ 1 ರಿಂದ 8ನೇ ತರಗತಿಯ ಮಕ್ಕಳಿಗೆ ಒಟ್ಟು 1300 ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಉಚಿತ ನೋಟ್ ಪುಸ್ತಕಗಳ ದಾನಿ ಹೆಚ್.ಎಂ.ಸಿದ್ದಲಿಂಗಯ್ಯ ಸೇರಿದಂತೆ ಅತಿಥಿ ಗಣ್ಯರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಉತ್ತಮ ರೈತ ಪ್ರಶಸ್ತಿ ಪುರಸ್ಕೃತ ಮಹಿಳೆ ಗೌರಮ್ಮ, ಹೆಚ್.ಎಸ್.ವಿವೇಕ್, ಅರ್ಚನಾ ವಿವೇಕ್, ರೈತ ಮುಖಂಡ ಜಡಿಯಪ್ಪ, ಕೆ.ವಿ.ಜಂಬಣ್ಣ, ಎಸ್.ಡಿ.ಎಂ.ಸಿ ಅಧ್ಯಕ್ಷ ಗುರು ಬಸವರಾಜ, ಶಾಲಾ ಮುಖ್ಯಗುರು ಗಂಗಾ ಭವಾನಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮದ ಮುಖಂಡರು, ಪಾಲಕರು, ಪೋಷಕರು ಭಾಗವಹಿಸಿದ್ದರು.