Home ಸುದ್ದಿ ಅಂತರಾಷ್ಟ್ರೀಯ ವಾಯುಭಾರ ಕುಸಿತ: ಒಡಿಶಾದಲ್ಲಿ ಜಲಪ್ರಳಯ

ವಾಯುಭಾರ ಕುಸಿತ: ಒಡಿಶಾದಲ್ಲಿ ಜಲಪ್ರಳಯ

ನವದೆಹಲಿ,ಅ.17-ಉಂಟಾಗಿರುವ ತೀವ್ರ ವಾಯುಭಾರ ಕುಸಿತದ ಪರಿಣಾಮವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಮಾನ್ಸೂನ್ ಅರ್ಭಟ ಜೋರಾಗಿದ್ದು, ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪಶ್ಚಿಮ ಬಂಗಾಳ ಹಾಗೂ ಒಡಿಶಾ ಕರಾವಳಿ ಭಾಗದಲ್ಲಿ ಸಕ್ರಿಯವಾಗಿರುವ ಈ ಹವಾಮಾನ ವೈಪರೀತ್ಯದಿಂದಾಗಿ ಬಾಲಸೋರ್, ಭದ್ರಕ್, ಜಾಜ್‍ಪುರ, ಮಯೂರ್‍ಭಂಜ್ ಮತ್ತು ಕಿಯೋಂಜಾರ್ ಸೇರಿದಂತೆ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೈತರಾಣಿ, ಬ್ರಹ್ಮಣಿ, ಸಲಾಂಡಿ, ಜಲ್ಕಾ ಹಾಗೂ ಬುಧಬಲಂಗಾ ನದಿಗಳು ಭೋರ್ಗರೆಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಸಾರ್ವಜನಿಕರನ್ನು ಸುರಕ್ಷಿತ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೀಡಿತ ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದ್ದು, ಉತ್ಕಲ್ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.


ಅಲ್ಲದೆ ಕೇಂದ್ರಪದ ಬಳಿ ರಾಷ್ಟ್ರೀಯ ಹೆದ್ದಾರಿ-53ರ ಬೃಹತ್ ಭಾಗ ಕುಸಿದು ಪಾರಾದೀಪ್ ಬಂದರು ಮತ್ತು ಜಾಜ್‍ಪುರ ನಡುವಿನ ಸಂಚಾರ ಕಡಿತಗೊಂಡಿದೆ.
ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಒಡಿಶಾ ಮಾತ್ರವಲ್ಲದೆ ಉತ್ತರ ಪ್ರದೇಶ, ಛತ್ತೀಸ್‍ಗಢ, ಜಾರ್ಖಂಡ್, ಪೂರ್ವ ಮಧ್ಯಪ್ರದೇಶ, ಅರುಣಾಚಲ ಪ್ರದೇಶ ಹಾಗೂ ಹಿಮಾಲಯನ್ ರಾಜ್ಯಗಳಾದ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು ಆರೆಂಜ್ ಅಲರ್ಟ್ ಜಾರಿಗೊಳಿಸಿದೆ. ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಮಳೆಯ ಭೀಕರತೆಗೆ ಜೂನ್ 30 ರಿಂದ ಆಗಸ್ಟ್ 16 ರವರೆಗೆ ಸುಮಾರು 187 ಜನರು ಪ್ರಾಣ ಕಳೆದುಕೊಂಡಿದ್ದು, 973 ಕೋಟಿ ರೂಪಾಯಿಗೂ ಅಧಿಕ ಆಸ್ತಿಪಾಸ್ತಿ ನಷ್ಟವಾಗಿದೆ. ಪರ್ವತ ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಹೆಚ್ಚಾಗಿರುವುದರಿಂದ ಪ್ರವಾಸಿಗರು ಮತ್ತು ಸ್ಥಳೀಯರು ನದಿ ತೀರ ಹಾಗೂ ಅಪಾಯಕಾರಿ ರಸ್ತೆಗಳಿಂದ ದೂರವಿರಲು ಆಡಳಿತ ಸೂಚಿಸಿದೆ.


ಇನ್ನೊಂದೆಡೆ ಕರ್ನಾಟಕ, ಕೇರಳ, ರಾಜಸ್ಥಾನ, ಗುಜರಾತ್ ಹಾಗೂ ಪಶ್ಚಿಮ ಮಧ್ಯಪ್ರದೇಶಗಳಲ್ಲಿ ಹವಾಮಾನ ತುಲನಾತ್ಮಕವಾಗಿ ಪ್ರಶಾಂತವಾಗಿರಲಿದ್ದು, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮಾತ್ರ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ಕೆಲವು ದಿನಗಳ ಕಾಲ ಬಂಗಾಳಕೊಲ್ಲಿಯ ಮಳೆಮಾರುತಗಳು ದೇಶದ ಪೂರ್ವ ಮತ್ತು ಮಧ್ಯ ಭಾಗಗಳಲ್ಲಿ ಸಕ್ರಿಯವಾಗಿರಲಿದ್ದು, ಸಾರ್ವಜನಿಕರು ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಅನಗತ್ಯ ಪ್ರಯಾಣದಿಂದ ದೂರವಿರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.