Home ಜಿಲ್ಲೆ ರಂಗಭೂಮಿಗೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅನನ್ಯ: ಮರಿ ಕೊಟ್ಟೂರು ದೇವರು

ರಂಗಭೂಮಿಗೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅನನ್ಯ: ಮರಿ ಕೊಟ್ಟೂರು ದೇವರು

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜೂ.14: ರಂಗಭೂಮಿ ಪರಂಪರೆಗೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅನನ್ಯವಾದುದೆಂದು ಶ್ರೀಧರಗಡ್ಡೆಯ ಕೊಟ್ಟೂರುಸ್ವಾಮಿ ಮಠದ ಮರಿ ಕೊಟ್ಟೂರು ದೇವರು ಹೇಳಿದ್ದಾರೆ.

ಅವರು ಮೊನ್ನೆ ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ರಂಗತೋರಣ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ “ಕಪ್ಪಗಲ್ಲು ನಾಟಕೋತ್ಸವ”ಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಳ್ಳಾರಿ ರಾಘವರು ರಂಗಭೂಮಿಯ ಮೂಲಕ ಕನ್ನಡ ಹಾಗೂ ತೆಲುಗು ಭಾಷೆಯ ಸೌಹಾರ್ದತೆಗೆ ಸೇತುವೆಯಂತೆ ಕಾರ್ಯನಿರ್ವಹಿಸಿದವರು. ಜೋಳದರಾಶಿ ದೊಡ್ಡನಗೌಡರು, ಸುಭದ್ರಮ್ಮ ಮನ್ಸೂರು, ಬೆಳಗಲ್ಲು ವೀರಣ್ಣ ಸೇರಿದಂತೆ ಅನೇಕರು ರಂಗಭೂಮಿ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದಾರೆಂದರು.

ಗ್ರಾಮೀಣ ಪರಿಸರದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳುವ ಮೂಲಕ ರಂಗತೋರಣ ಸಂಸ್ಥೆಯ ರಂಗಕಾಳಜಿಯ ಕಾರ್ಯನಿರ್ವಹಿಸಿದೆ. ಯಾವುದೇ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳು ನಗರ ಪ್ರದೇಶಕ್ಕೆ ಸೀಮಿತಗೊಳ್ಳದೆ ಹಳ್ಳಿಹಳ್ಳಿಗೆ ಪಸರಿಸುವಂತಾಗಬೇಕು. ಗ್ರಾಮೀಣರಲ್ಲಿ ಸಾಂಸ್ಕೃತಿಕ ಪರಿಸರ ಬೆಳೆಸುವ ದಿಸೆಯ ಕೆಲಸವನ್ನು ಎಲ್ಲ ರಂಗ ಸಂಸ್ಥೆಗಳು ಸಹ ಮಾಡಬೇಕು. ಅನೇಕ ವರ್ಷಗಳಿಂದ ರಂಗಸಂಸ್ಕೃತಿಯನ್ನು ಬಿತ್ತುತ್ತಿರುವ ರಂಗತೋರಣ ಸಂಸ್ಥೆ ಸೇವಾ ಕಾರ್ಯ ಶ್ಲಾಘನೀಯವಾದದ್ದು. ನಾಡಿನ ಅನೇಕ ರಂಗಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಮೂಲಕ ರಂಗಭೂಮಿಯ ಬೆಳವಣಿಗೆಗೆ ರಂಗತೋರಣ ಸಂಸ್ಥೆ ಶ್ರಮಿಸುತ್ತಿದೆಂದರು.

ರಂಗತೋರಣ ಸಂಸ್ಥೆಯ ಅಡವಿಸ್ವಾಮಿ, ಸಂಸ್ಥೆಯ ಈವರೆಗೆ ನಡೆಸಿರುವ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ತಿಳಿಸಿದರು.

ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಗ್ರಾಮದ ಮುಖಂಡರಾದ ಕೋರಿ ಬಸವರಾಜ್, ಕೆ.ಎಂ ಮಂಜುನಾಥಸ್ವಾಮಿ, ಬುಶ್ಯಪ್ಪ, ಉಪ್ಪಾರ ಬಸವರಾಜ್, ದ್ಯಾವಣ್ಣ ಉಪಸ್ಥಿತರಿದ್ದರು. ಚಂದ್ರಶೇಖರ ಆಚಾರ್ ಕಪ್ಪಗಲ್ಲು ಹಾಗೂ ಮೆಹತಾಬ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಜೇವರ್ಗಿ ರಾಜಣ್ಣ ರಚನೆ-ನಿರ್ದೇಶನದ “ಮುತ್ತಿನಂತ ಅತ್ತಿಗೆ” ನಾಟಕ ಪ್ರದರ್ಶನಗೊಂಡಿತು.