
ಸಂಜೆವಾಣಿ ವಾರ್ತೆ
ಹೊಸಪೇಟೆ.ಅ.21 ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಶೇ.17 ಹಾಗೂ ಶೇ.7 ರಷ್ಟು ಹೆಚ್ಚಳ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ಸಂವಿಧಾನದ ಷೆಡ್ಯೂಲ್ 9ಕ್ಕೆ ಸೇರಿಸಿ ಕ್ರಮ ಕೈಗೊಳ್ಳುವಂತೆ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರ್. ಭಾಸ್ಕರ್ ರೆಡ್ಡಿ, ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಿದ್ದ ಕ್ರಮವನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ.
ಪ್ರಸ್ತುತ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಳಕ್ಕೆ ನ್ಯಾಯಮೂರ್ತಿ ಹೆಚ್.ಎನ್.ನಾಘಮೋಹನ್ ದಾಸ್ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರಂತೆ ಹಿಂದಿನ ಬೊಮ್ಮಾಯಿ ಸರ್ಕಾರ ಕೂಡ ಕೇಂದ್ರಕ್ಕೆ ಮೀಸಲಾತಿ ಹೆಚ್ಚಳಕ್ಕೆ ಮನವಿ ಮಾಡಿತ್ತು. ಆದರೆ ಹೈಕೋರ್ಟ್ ಮೀಸಲಾತಿ ಹೆಚ್ಚಳ ಕ್ರಮವನ್ನು ರದ್ದುಗೊಳಿಸಿರುವುದರಿಂದ ಕೇಂದ್ರ ಸರ್ಕಾರ ತಕ್ಷಣ ಸಂವಿಧಾನದ ಷೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡುವ ಮೂಲಕ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ತಮಿಳುನಾಡಿನಲ್ಲಿ ಶೇ.69 ರಷ್ಟು ಹಾಗೂ ಇತರೆ ರಾಜ್ಯಗಳಲ್ಲಿ ಮೀಸಲಾತಿ ಹೆಚ್ಚಳ ಜಾರಿಯಲ್ಲಿರುವುದರಿಂದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ರಷ್ಟು ಮೀಸಲಾತಿಯನ್ನು ತುರ್ತಾಗಿ ಜಾರಿಗೊಳಿಸಿದ್ದ ಈ ಹಿಂದಿನ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಂವಿಧಾನದ ಆಶಯದಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವುದು ನ್ಯಾಯಬದ್ದವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಸಂವಿಧಾನದ ಷೆಡ್ಯೂಲ್ 9ಕ್ಕೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ್ ರೆಡ್ಡಿ ಒತ್ತಾಯಿಸಿದ್ದಾರೆ.























