Home ಜಿಲ್ಲೆ ಮೈಸೂರು ನಿರಂತರ ತಲೆನೋವಿಗೆ ಆರಂಭದಲ್ಲೇ ವೈದ್ಯರ ಸಲಹೆ ಪಡೆಯಲು ಕರೆ

ನಿರಂತರ ತಲೆನೋವಿಗೆ ಆರಂಭದಲ್ಲೇ ವೈದ್ಯರ ಸಲಹೆ ಪಡೆಯಲು ಕರೆ

ಸಂಜೆವಾಣಿ ನ್ಯೂಸ್
ಮೈಸೂರು, ಜು.13:-
ನರವೈಜ್ಞಾನಿಕಕ್ಕೆ ಸಂಬಂಧಿಸಿದ ಕಾಯಿಲೆಗಳು ಆರಂಭಿಕ ಹಂತದಲ್ಲಿ ಕಾಣಿಸಿಕೊಂಡಾಗ, ಅವುಗಳ ಲಕ್ಷಣಗಳನ್ನು ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ನಿರಂತರವಾದ ತಲೆನೋವು, ಆಗಾಗ ಬರುವ ಮೂರ್ಛೆ/ಸೆಳೆತ, ಹಠಾತ್ ಪ್ರಜ್ಞೆ ತಪ್ಪುವುದು, ದೃಷ್ಟಿ ಮಂಜಾಗುವುದು, ಕೈ-ಕಾಲುಗಳಲ್ಲಿನ ದೌರ್ಬಲ್ಯ, ನೆನಪಿನ ಶಕ್ತಿ ಕುಂದುವುದು ಅಥವಾ ನಡವಳಿಕೆಯಲ್ಲಿನ ಬದಲಾವಣೆಗಳನ್ನು ಸಾಮಾನ್ಯವಾಗಿ ಅತಿಯಾದ ಒತ್ತಡ, ಆಯಾಸ ಅಥವಾ ತಾತ್ಕಾಲಿಕ ಆರೋಗ್ಯ ಸಮಸ್ಯೆಗಳೆಂದು ತಪ್ಪಾಗಿ ಭಾವಿಸಲಾಗುತ್ತದೆ. ಆದರೆ, ಈ ಲಕ್ಷಣಗಳು ಕೆಲವೊಮ್ಮೆ ಗಂಭೀರವಾದ ನರದ ಕಾಯಿಲೆಗಳ ಆರಂಭಿಕ ಮುನ್ಸೂಚನೆ ಆಗಿರಬಹುದು. ಇದನ್ನು ತಿಳಿದುಕೊಳ್ಳದೆ ನಿರ್ಲಕ್ಷಿಸುವುದು ದೊಡ್ಡ ತಪ್ಪಾಗಬಹುದು. ಇವುಗಳಿಗೆ ಸಕಾಲಿಕ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಇಂತಹ ಎಚ್ಚರಿಕೆಯ ಲಕ್ಷಣಗಳ ಬಗ್ಗೆ ಅರಿವು ಮೂಡಿಸುವುದು, ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ ಉತ್ತಮ ಚಿಕಿತ್ಸೆಯ ಫಲಿತಾಂಶಗಳನ್ನು ಕಂಡುಕೊಳ್ಳಲು ಅತ್ಯಂತ ಸಹಾಯಕವಾಗುತ್ತದೆ.


ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮಕ್ಸೂದ್ ಅಹ್ಮದ್ ಎ. ಆರ್. ಅವರು, ಬ್ರೈನ್ ಟ್ಯೂಮರ್‍ಗಳು ಎಲ್ಲಾ ವಯೋಮಾನದವರ ಮೇಲೂ ಪರಿಣಾಮ ಬೀರಬಹುದು ಮತ್ತು ಇಂತಹ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ವಿವರಿಸಿದರು. “ಬಹಳಷ್ಟು ರೋಗಿಗಳು ಆರಂಭದಲ್ಲಿ ನಿರಂತರವಾದ ತಲೆನೋವು, ಸೆಳೆತ, ಪ್ರಜ್ಞೆ ತಪ್ಪುವುದು, ದೈಹಿಕ ದೌರ್ಬಲ್ಯ, ದೃಷ್ಟಿ ದೋಷ, ದೇಹದ ಸಮತೋಲನದಲ್ಲಿ ಸಮಸ್ಯೆ ಅಥವಾ ನಡವಳಿಕೆಯಲ್ಲಿ ಬದಲಾವಣೆಯನ್ನು ಅನುಭವಿಸುತ್ತಾರೆ. ದುರದೃಷ್ಟವಶಾತ್, ಈ ರೋಗಲಕ್ಷಣಗಳನ್ನು ಕೆಲವೊಮ್ಮೆ ನಿರ್ಲಕ್ಷಿಸಲಾಗುತ್ತದೆ ಅಥವಾ ಇತರೆ ಸಣ್ಣಪುಟ್ಟ ಕಾರಣಗಳೆಂದು ಭಾವಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಯಮಿತ ತಪಾಸಣೆ ಮಾಡಿಸುವುದರಿಂದ, ಚಿಕಿತ್ಸಾ ಆಯ್ಕೆಗಳು ಹೆಚ್ಚು ಪರಿಣಾಮಕಾರಿಯಾಗಿರುವ ಹಂತದಲ್ಲಿಯೇ ಬ್ರೈನ್ ಟ್ಯೂಮರ್‍ಗಳನ್ನು ಗುರುತಿಸಲು ಪ್ರಮುಖ ಪಾತ್ರ ವಹಿಸುತ್ತದೆ.” ಎಂದು ಅವರು ಹೇಳಿದರು.


ಮಣಿಪಾಲ್ ಆಸ್ಪತ್ರೆ ಮೈಸೂರಿನ ಹಾಸ್ಪಿಟಲ್ ಡೈರೆಕ್ಟರ್ ಆದ ಸಂದೀಪ್ ಪಟೇಲ್ ಬಿ. ಜೆ. ಅವರು ಮಾತನಾಡಿ, “ನರಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಆರಂಭದಲ್ಲೇ ಗುರುತಿಸಿದರೆ ಯಶಸ್ವಿಯಾಗಿ ಗುಣಪಡಿಸಬಹುದು. ಇಂತಹ ಕಾರ್ಯಕ್ರಮಗಳ ಮೂಲಕ ಜನರು ರೋಗದ ಲಕ್ಷಣಗಳನ್ನು ಬೇಗನೆ ಪತ್ತೆಹಚ್ಚಿ, ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಯು ನುರಿತ ತಜ್ಞರು, ಅತ್ಯಾಧುನಿಕ ಸ್ಕ್ಯಾನಿಂಗ್ ಮತ್ತು ಸುಧಾರಿತ ಐಸಿಯು ಸೌಲಭ್ಯಗಳೊಂದಿಗೆ ಬ್ರೈನ್ ಟ್ಯೂಮರ್, ಸ್ಟ್ರೋಕ್ ಹಾಗೂ ನರರೋಗಗಳಿಗೆ ಅತ್ಯುತ್ತಮ ತುರ್ತು ಚಿಕಿತ್ಸೆ ನೀಡಲು ಸಂಪೂರ್ಣವಾಗಿ ಸಜ್ಜಾಗಿದೆ.” ಎಂದು ಹೇಳಿದರು.


ಇದೇ ಉದ್ದೇಶದಿಂದ, ಮೈಸೂರಿನ ಮಣಿಪಾಲ್ ಆಸ್ಪತ್ರೆಯು ಭಾನುವಾರ ‘ನ್ಯೂರೋ ಹೆಲ್ತ್ ಕಮ್ಯುನಿಟಿ ಮೀಟ್’ ಅನ್ನು ಆಯೋಜಿಸಿತ್ತು. ಬ್ರೈನ್ ಟ್ಯೂಮರ್ ಮತ್ತು ತಲೆನೋವು ಸಮಸ್ಯೆಗಳ ಕುರಿತು ಹೆಚ್ಚು ಗಮನ ಹರಿಸಿದ್ದ ಈ ಜಾಗೃತಿ ಕಾರ್ಯಕ್ರಮದಲ್ಲಿ ರೋಗಿಗಳು, ಅವರ ಕುಟುಂಬದವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಮಣಿಪಾಲ್ ಆಸ್ಪತ್ರೆ ಮೈಸೂರಿನ ಆಸ್ಪತ್ರೆ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. , ಡಾ. ಉಪೇಂದ್ರ ಶೆಣೈ, ಚೀಫ್ ಆಫ್ ಮೆಡಿಕಲ್ ಸರ್ವಿಸಸ್, ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಕಾರ್ಯಕ್ರಮವನ್ನು ಮೈಸೂರು ಮಣಿಪಾಲ್ ಆಸ್ಪತ್ರೆಯ ಡಾ. ಮಕ್ಸೂದ್ ಅಹ್ಮದ್ ಎ. ಆರ್., ಸೀನಿಯರ್ ಕನ್ಸಲ್ಟೆಂಟ್ – ನ್ಯೂರೋಸರ್ಜನ್ (ಸೆರೆಬ್ರೊವಾಸ್ಕುಲರ್ ಮತ್ತು ಎಂಡೋವಾಸ್ಕುಲರ್), ಡಾ. ವೇಣುಗೋಪಾಲ್ ಕೃಷ್ಣ, ಸೀನಿಯರ್ ಕನ್ಸಲ್ಟೆಂಟ್ – ನ್ಯೂರಾಲಜಿ, ಡಾ. ಸುಚರಿತಾ ಎಂ. ವಿ. ಕನ್ಸಲ್ಟೆಂಟ್ – ನ್ಯೂರಾಲಜಿ ಹಾಗೂ ಡಾ. ಹೆಚ್. ಎಸ್. ಮೊಹಮ್ಮದ್ ಸೊಹ್ರಾಬ್, ಅಸೋಸಿಯೇಟ್ ಕನ್ಸಲ್ಟೆಂಟ್ – ನ್ಯೂರೋಸರ್ಜರಿ ಅವರು ನಡೆಸಿಕೊಟ್ಟರು.