
ಸಂಜೆವಾಣಿ ನ್ಯೂಸ್
ಮೈಸೂರು, ಜು.14:- ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನಗರಪಾಲಿಕೆಯು ನಗರದ ಪ್ರಮುಖ ರಸ್ತೆ ಮತ್ತು ಫುಟ್‍ಪಾತ್‍ಗಳಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಆದರೆ ಈ ಕಾರ್ಯಾಚರಣೆಯ ಹಿಂದೆ ನೂರಾರು ಕುಟುಂಬಗಳ ಜೀವನೋಪಾಯದ ಪ್ರಶ್ನೆ ಅಡಗಿದ್ದು, ಬೀದಿಬದಿ ವ್ಯಾಪಾರಿಗಳು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಕಳೆದ ಎರಡು ದಿನಗಳಿಂದ ನಡೆದ ಫುಟ್‍ಪಾತ್ ಒತ್ತುವರಿ ಕಾರ್ಯಾಚರಣೆಯಲ್ಲಿ ಹಲವು ಪೆಟ್ಟಿಗೆ ಅಂಗಡಿಗಳು ಮತ್ತು ತಾತ್ಕಾಲಿಕ ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಸಲಾಗಿದೆ. ಒಂದು ಕಡೆ ಒತ್ತುವರಿ ತೆರವು ನಡೆಯುತ್ತಿದ್ದರೆ, ಮತ್ತೊಂದೆಡೆ ವ್ಯಾಪಾರಿಗಳ ಪುನರ್ವಸತಿಗಾಗಿ ವರ್ಷಗಳ ಹಿಂದೆ ನಿರ್ಮಿಸಲಾದ ವ್ಯಾಪಾರ ಕೇಂದ್ರಗಳು ಬಳಕೆಯಾಗದೆ ಅನಾಥವಾಗಿ ಉಳಿದಿವೆ ಎಂಬುದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಖಾಲಿ ಉಳಿದಿವೆ ವ್ಯಾಪಾರ ಕೇಂದ್ರಗಳು:
ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ವತಿಯಿಂದ ಸಣ್ಣ ರೈತರು ಮತ್ತು ಸ್ಥಳೀಯ ಉತ್ಪಾದಕರು ನೇರವಾಗಿ ಗ್ರಾಹಕರಿಗೆ ಉತ್ಪನ್ನ ಮಾರಾಟ ಮಾಡಲು ನಗರದ ವಿವಿಧೆಡೆ ವ್ಯಾಪಾರ ಕೇಂದ್ರಗಳನ್ನು ನಿರ್ಮಿಸಲಾಗಿತ್ತು. ಅಶೋಕಪುರಂ ಅಶೋಕ(ಬಲ್ಲಾಳ್) ವೃತ್ತ, ಶಕ್ತಿನಗರ, ವಾಲ್ಮೀಕಿ ಭವನದ ಸಮೀಪ ಮತ್ತು ಶಾರದಾದೇವಿ ನಗರದಲ್ಲಿ ನಿರ್ಮಿಸಲಾದ ಈ ಕೇಂದ್ರಗಳು ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗದೆ ದುಸ್ಥಿತಿಗೆ ತಲುಪಿವೆ.
ಸಣ್ಣ ರೈತರಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ನಿರ್ಮಾಣವಾದ ಈ ಕೇಂದ್ರಗಳಲ್ಲಿ ವ್ಯಾಪಾರ ಚಟುವಟಿಕೆಗಳು ನಡೆಯದ ಕಾರಣ ಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾದವು. ಕೆಲವೆಡೆ ನಿರ್ವಹಣೆ ಕೊರತೆ, ಇನ್ನೂ ಕೆಲವೆಡೆ ರೈತರ ಆಸಕ್ತಿಯ ಕೊರತೆಯಿಂದ ಸಾರ್ವಜನಿಕ ಹಣದಲ್ಲಿ ನಿರ್ಮಿಸಲಾದ ಮೂಲಸೌಕರ್ಯಗಳು ಇಂದು ಖಾಲಿ ಉಳಿದಿವೆ.
ಪರ್ಯಾಯ ವ್ಯವಸ್ಥೆ ನೀಡಿ” ಎಂಬ ವ್ಯಾಪಾರಿಗಳ ಮನವಿ:
ಪಾಲಿಕೆಯ ತೆರವು ಕಾರ್ಯಾಚರಣೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಬೀದಿ ಬದಿ ವ್ಯಾಪಾರಿಗಳಿಗೆ ಇದೇ ಖಾಲಿ ಕೇಂದ್ರಗಳನ್ನು ಪರ್ಯಾಯವಾಗಿ ನೀಡಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಮುಡಾ ನಿರ್ಮಿಸಿರುವ ಈ ಕೇಂದ್ರಗಳು ಇನ್ನೂ ಸಂಪೂರ್ಣವಾಗಿ ನಗರಪಾಲಿಕೆ ಆಡಳಿತ ವ್ಯಾಪ್ತಿಗೆ ಬಂದಿಲ್ಲ ಎನ್ನಲಾಗಿದ್ದು, ತಕ್ಷಣ ಹಂಚಿಕೆ ಮಾಡಲು ಆಡಳಿತಾತ್ಮಕ ಅಡಚಣೆಗಳಿವೆ. ನಮ್ಮ ಬಳಿ ಅಂಗಡಿ ಕಟ್ಟುವಷ್ಟು ಹಣವಿಲ್ಲ. ಪ್ರತಿದಿನ ದುಡಿದರೆ ಮಾತ್ರ ಕುಟುಂಬಕ್ಕೆ ಊಟ. ಈಗ ಗಾಡಿಯನ್ನೂ ತೆರವುಗೊಳಿಸಿದರೆ ನಾವು ಏನು ಮಾಡಬೇಕು? ಹೀಗಾಗಿ ಒಂದೇ ಸಾಲಿನಲ್ಲಿ ಕುಳಿತು ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ವ್ಯಾಪಾರಿಗಳು ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಹಲವು ವರ್ಷಗಳಿಂದ ತಿಂಡಿ ಮಾರಾಟ ಮಾಡಿ ಮಕ್ಕಳನ್ನು ಓದಿಸುತ್ತಿದ್ದೇವೆ. ನಮಗೆ ಒಂದು ನಿಗದಿತ ಜಾಗ ಕೊಟ್ಟರೆ ಅಲ್ಲೇ ವ್ಯಾಪಾರ ಮಾಡುತ್ತೇವೆ. ಆದರೆ ಬದುಕಿಗೆ ಪರ್ಯಾಯ ವ್ಯವಸ್ಥೆ ಇಲ್ಲದೆ ತೆರವು ಮಾಡುವುದು ಅನ್ಯಾಯ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು.
2 ಲಕ್ಷ ರೂ. ವೆಚ್ಚದ ಹೊಸ ವ್ಯಾಪಾರ ವಲಯದ ಪ್ರಸ್ತಾವ:ಬಲ್ಲಾಳ್ ವೃತ್ತದ ಇನ್ನೊಂದು ಭಾಗದ ಫುಟ್‍ಪಾತ್‍ನಲ್ಲಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ವ್ಯಾಪಾರ ವಲಯ ನಿರ್ಮಿಸುವ ಕುರಿತು ಪಾಲಿಕೆಯ ಎರಡನೇ ವಲಯ ಕಚೇರಿ ಅಧಿಕಾರಿಗಳು ರೂಪರೇಷೆ ತಯಾರಿಸಿ ಆಯುಕ್ತರಿಗೆ ಸಲ್ಲಿಸಿದ್ದಾರೆ ಎಂದು ಮಾರಾಟಗಾರರ ಸಂಘದ ಮೂಲಗಳು ತಿಳಿಸಿವೆ.
ಸರ್ಕಾರ, ಮುಡಾ, ಪಾಲಿಕೆ ಸಮನ್ವಯಕ್ಕೆ ಒತ್ತಾಯ:
ಅಶೋಕ ವೃತ್ತ, ಕಲ್ಯಾಣಗಿರಿ, ವಾಲ್ಮೀಕಿ ಭವನದ ಸಮೀಪ ಮತ್ತು ಶಾರದಾದೇವಿ ನಗರದಲ್ಲಿ ಈಗಾಗಲೇ ನಿರ್ಮಾಣಗೊಂಡು ಖಾಲಿ ಉಳಿದಿರುವ ವ್ಯಾಪಾರ ಕೇಂದ್ರಗಳನ್ನು ಪುನರುಜ್ಜೀವನಗೊಳಿಸಿ ಫುಟ್‍ಪಾತ್ ವ್ಯಾಪಾರಿಗಳಿಗೆ ಹಂಚಿಕೆ ಮಾಡುವ ಕುರಿತು ಸರ್ಕಾರ, ಮುಡಾ ಮತ್ತು ನಗರಪಾಲಿಕೆ ಸಮನ್ವಯದೊಂದಿಗೆ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಸರ್ಕಾರದಿಂದ ನಿರ್ಮಿಸಿರುವ ಫುಡ್ ಕೋರ್ಟ್ ಮತ್ತು ವ್ಯಾಪಾರ ಕೇಂದ್ರಗಳು ತುಂಬಾ ಚಿಕ್ಕವು. ಜನರು ನಿಲ್ಲುವುದಕ್ಕೂ ಜಾಗವಿಲ್ಲ. ಒಂದು ರಸ್ತೆಯಲ್ಲಿ ಹತ್ತಾರು ವ್ಯಾಪಾರಿಗಳು ಜೀವನ ಕಟ್ಟಿಕೊಂಡಿದ್ದಾರೆ. ಮೊದಲು ವಲಯ ಕಚೇರಿಗಳ ವ್ಯಾಪ್ತಿಯಲ್ಲಿರುವ ವಸತಿ ಪ್ರದೇಶಗಳ ಜನರಿಗೆ ಅನುಕೂಲವಾಗುವಂತೆ ವ್ಯಾಪಾರ ಕೇಂದ್ರಗಳನ್ನು ನಿರ್ಮಿಸಲಿ. ನಂತರ ನಮ್ಮನ್ನು ತೆರವುಗೊಳಿಸಲಿ ಎಂದು ಫುಟ್‍ಪಾತ್ ವ್ಯಾಪಾರಸ್ಥರು ಆಗ್ರಹಿಸಿದರು.
ಇಲ್ಲವಾದರೆ ಖಾಲಿಯಾದ ಫುಟ್‍ಪಾತ್‍ಗಳ ಮೇಲೆ ಸರಾಗವಾಗಿ ನಡೆದಾಡುವ ಜನರ ಪಾದಗಳ ಕೆಳಗೆ ನೂರಾರು ಕುಟುಂಬಗಳ ಕಣ್ಣೀರ ಕಥೆಗಳು ಸದಾ ನರಳಾಡುತ್ತಿರುತ್ತವೆ ಎಂದು ವ್ಯಾಪಾರಿಗಳು ಪ್ರಶ್ನಿಸಿದ್ದಾರೆ.

































