
ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಆರ್ಥಿಕ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ ಸಹಕಾರ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗಳೊಂದಿಗೆ ಮುನ್ನಡೆಯುತ್ತಿದೆ. ೯೫ ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿರುವ ಸಂಘ ಇದೀಗ ಸತತ ೯ನೇ ಬಾರಿಗೆ ಎಸ್ಸಿಡಿಸಿಸಿ ಬ್ಯಾಂಕಿನ ಪ್ರತಿಷ್ಠಿತ ‘ಸಾಧನಾ ಪ್ರಶಸ್ತಿ’ಗೆ ಪಾತ್ರವಾಗಿದೆ.
ಸಹಕಾರಿ ನೌಕರ ಸದಸ್ಯರಿಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆ ಒದಗಿಸುತ್ತಿರುವ ಸಂಘ ಕಳೆದ ೩೨ ವರ್ಷಗಳಿಂದ ಸದಸ್ಯರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುತ್ತಾ ಸದೃಢವಾಗಿ ಬೆಳೆದು ಬಂದಿದೆ. ಮಂಗಳೂರು ನಗರದ ಕೊಡಿಯಾಲ್ಬೈಲ್ನಲ್ಲಿ ಮೂರು ಅಂತಸ್ತಿನ ಸ್ವಂತ ಕಟ್ಟಡವನ್ನು ಹೊಂದಿರುವ ಸಂಘ ನಿರಂತರ ಲಾಭ ಗಳಿಕೆಯೊಂದಿಗೆ ಸಹಕಾರಿ ನೌಕರರ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಂಡಿದೆ.ಸಂಘದ ನಿರಂತರ ಕಾರ್ಯಸಾಧನೆ ಹಾಗೂ ಉತ್ತಮ ಸೇವೆಯನ್ನು ಗುರುತಿಸಿ ಎಸ್ಸಿಡಿಸಿಸಿ ಬ್ಯಾಂಕ್ ನೀಡುವ ‘ಸಾಧನಾ ಪ್ರಶಸ್ತಿ’ಯನ್ನು ಸಂಘ ೨೦೧೭-೧೮ನೇ ಸಾಲಿನಿಂದ ಸತತವಾಗಿ ಪಡೆಯುತ್ತಿದೆ. ೨೦೧೭-೧೮ರಿಂದ ೨೦೨೪-೨೫ನೇ ಸಾಲಿನವರೆಗೆ ಸತತ ಎಂಟು ಬಾರಿ ಪ್ರಶಸ್ತಿ ಪಡೆದಿದ್ದ ಸಂಘ ಇದೀಗ ೨೦೨೫-೨೬ನೇ ಸಾಲಿನಲ್ಲೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು, ಸತತ ೯ನೇ ಬಾರಿಗೆ ಸಾಧನಾ ಪ್ರಶಸ್ತಿಗೆ ಭಾಜನವಾಗಿದೆ.ಶನಿವಾರ ನಡೆದ ಎಸ್ಸಿಡಿಸಿಸಿ ಬ್ಯಾಂಕಿನ ೧೧೨ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿಯನ್ನು ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಎಸ್. ಜಗದೀಶ್ಚಂದ್ರ ಅಂಚನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಅವರಿಗೆ ಪ್ರದಾನ ಮಾಡಿದರು.
ಎಸ್ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ.ವಾದಿರಾಜ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೋಟ್ಟು, ಎಸ್.ಬಿ. ಜಯರಾಮ ರೈ, ಮಹೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಜೈರಾಜ್ ಬಿ.ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಎಸ್.ಎನ್. ಮನ್ಮಥ, ಕುಶಾಲಪ್ಪ ಗೌಡ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಉಭಯ ಜಿಲ್ಲೆಗಳ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್., ಲಾವಣ್ಯ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಉಪಾಧ್ಯಕ್ಷ ರಾಘವ ಆರ್. ಉಚ್ಚಿಲ್, ನಿರ್ದೇಶಕರಾದ ಜಯಪ್ರಕಾಶ್ ರೈ, ನಿಶಿತ ಜಯರಾಮ್ , ಕಿರಣ್ ಕುಮಾರ್ ಶೆಟ್ಟಿ, ಪ್ರೇಮ್ ರಾಜ್ ಭಂಡಾರಿ ಇದ್ದರು.

































