Home ಜಿಲ್ಲೆ ಮೈಸೂರು ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಗಂಡಾನೆ ಸಾವು

ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಗಂಡಾನೆ ಸಾವು

ಸಂಜೆವಾಣಿ ವಾರ್ತೆ
ಹನೂರು ನ 20 :-
ತಾಲೂಕಿನ ಕಾವೇರಿ ವನ್ಯಜೀವಿ ವಲಯ ವ್ಯಾಪ್ತಿಯ ಬಂಡಳ್ಳಿ – ತೆಳ್ಳನೂರು ರಸ್ತೆ ಮಾರ್ಗದಲ್ಲಿರುವ ಅರಣ್ಯ ಸ್ವಾಗತ ಕಮಾನು ಬಳಿ ಸುಮಾರು 35 ವರ್ಷ ವಯಸ್ಸಿನ ಗಂಡಾನೆಯೊಂದು ಮೃತಪಟ್ಟಿದೆ.


ಬುಧವಾರ ಬೆಳಗ್ಗೆ ಕಮಾನು ಬಳಿ ಆನೆ ಮೃತಪಟ್ಟು ಬಿದ್ದಿರುವುದನ್ನು ಕಂಡುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ (ಆರ್.ಎಫ್.ಒ) ಸುಂದರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಆನೆ ಮೃತಪಟ್ಟ ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ಕುರುಹುಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.


ಪ್ರಾಥಮಿಕ ಪರಿಶೀಲನೆಯಲ್ಲಿ ಆನೆಯು ಸ್ವಾಭಾವಿಕವಾಗಿ ಮೃತಪಟ್ಟಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಸಾವಿಗೆ ನಿಖರ ಕಾರಣ ತಿಳಿಯಲು ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಮರಣೋತ್ತರ ಪರೀಕ್ಷೆಯ ನಂತರ ಆನೆಯ ಅಂತ್ಯಸಂಸ್ಕಾರವನ್ನು ಅರಣ್ಯ ಇಲಾಖೆಯ ನಿಯಮದಂತೆ ಸ್ಥಳದಲ್ಲೇ ನಡೆಸಲಾಗುವುದು ಎಂದು ಆರ್.ಎಫ್.ಒ ಸುಂದರ್ ತಿಳಿಸಿದ್ದಾರೆ.


ಇತ್ತೀಚಿನ ದಿನಗಳಲ್ಲಿ ವಯೋಸಹಜ ಕಾರಣಗಳಿಂದ ಆನೆಗಳು ಮೃತಪಡುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಸ್ಥಳೀಯರು ಹಾಗೂ ಪ್ರಕೃತಿ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಆನೆಗಳ ಸಂರಕ್ಷಣೆಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.