Home ಸಿನೆಮಾ ಏಳು ಭಾಷೆಗಳಲ್ಲಿ ‘ಲಾರ್ಡ್ ಗಾಗ’

ಏಳು ಭಾಷೆಗಳಲ್ಲಿ ‘ಲಾರ್ಡ್ ಗಾಗ’

ವಿಭಿನ್ನ ಕಥೆಯೊಂದಿಗೆ ಕಲ್ಟ್ ಸಿನಿಮಾ ಪ್ರಯೋಗ!

ಟೈಟಲ್ ಪೋಸ್ಟರ್, ಮೋಶನ್ ಪೋಸ್ಟರ್ ಬಿಡುಗಡೆ

ವಿಭಿನ್ನ ಶೀರ್ಷಿಕೆ ಮತ್ತು ಕುತೂಹಲಕಾರಿ ಕಥಾಹಂದರದ ಮೂಲಕ ಗಮನ ಸೆಳೆದಿರುವ ‘ಲಾರ್ಡ್ ಗಾಗ’ ಸಿನಿಮಾ ಇದೀಗ ತನ್ನ ಟೈಟಲ್ ಪೋಸ್ಟರ್ ಹಾಗೂ ಮೋಶನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಸೇರಿದಂತೆ ಏಳುಕ್ಕೂ ಹೆಚ್ಚು ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ

‘ಝೀರೋ ಗ್ರ್ಯಾವಿಟಿ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಉದ್ಯಮಿ ಮುಕಿ ರೆಘುನಾಥನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ವೈಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಶೂನ್ಯ ನಾಯಕನಾಗಿ ನಟಿಸಿದ್ದು, ಸ್ವರೂಪಿಣಿ ನಾರಾಯಣ್ ಹಾಗೂ ದಿಶಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಮುಕಿ ರೆಘುನಾಥನ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ಕಥೆಯ ಕುರಿತು ಮಾತನಾಡಿರುವ ನಿರ್ದೇಶಕ ವೈಕೆ, ‘ಲಾರ್ಡ್ ಗಾಗ’ ಒಂದು ವಿಭಿನ್ನ ಭಾರತೀಯ ಕಲ್ಟ್ ಸಿನಿಮಾ. ಮನುಷ್ಯನ ಮನಸ್ಸಿನಲ್ಲಿ ಮೂಡುವ ಪ್ರೀತಿ, ಪ್ರೇಮ, ಭಾವನೆ, ವ್ಯಸನ ಹಾಗೂ ಆಯ್ಕೆಗಳ ಸುತ್ತ ಕಥೆ ಸಾಗುತ್ತದೆ. ಅಹಂ ಕೇಂದ್ರಿತ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಹಿಮ್ಮುಖ ನಿರೂಪಣೆಯಲ್ಲಿ ಕಟ್ಟಿಕೊಡಲಾಗಿದೆ. ಕಾಲಾತೀತವಾದ ಕಥೆಯನ್ನು ಹೊಸ ರೀತಿಯಲ್ಲಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಿದ್ದೇವೆ ಎಂದು ವಿವರಿಸಿದ್ದಾರೆ.

ಚಿತ್ರದ ನಿರ್ಮಾಣದ ಕುರಿತು ಮಾತನಾಡಿದ ಮುಕಿ ರೆಘುನಾಥನ್, ಸಿನಿಮಾವನ್ನು ಕಾರ್ಪೊರೇಟ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಕಲಾವಿದರು ಮತ್ತು ತಂತ್ರಜ್ಞರಿಗೆ ಸಂಭಾವನೆಯೊಂದಿಗೆ ವಿಮೆ, ಗುಣಮಟ್ಟದ ಸಾವಯವ ಆಹಾರ, ವಸತಿ ಹಾಗೂ ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಒದಗಿಸಿದ್ದೇವೆ. ಚಿತ್ರರಂಗಕ್ಕೆ ಹೊಸ ಮೈಲಿಗಲ್ಲಾಗಬೇಕು ಎಂಬ ಉದ್ದೇಶದಿಂದ ತಂಡ ಶ್ರಮಿಸಿದೆ. ಈಗಾಗಲೇ ವಿವಿಧ ವರ್ಗಗಳ ಮೂರು ಸಾವಿರಕ್ಕೂ ಅಧಿಕ ಪ್ರೇಕ್ಷಕರಿಗೆ ಚಿತ್ರ ಪ್ರದರ್ಶಿಸಿ, ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದು ಅಂತಿಮ ರೂಪ ನೀಡಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಯಕ ಶೂನ್ಯ ಮಾತನಾಡಿ, “ಈ ಸಿನಿಮಾದಲ್ಲಿ ನಾನು ನಾಯಕನಾಗಿ ನಟಿಸಿದ್ದೇನೆ ಎನ್ನುವುದಕ್ಕಿಂತ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದೇನೆ ಎನ್ನುವುದು ಸೂಕ್ತ. ಇಲ್ಲಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೇ ನಿಜವಾದ ನಾಯಕ.ಚಿತ್ರದ ಕಥೆ ಮತ್ತು ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಲಿವೆ ಎಂಬ ನಂಬಿಕೆಯಿದೆ” ಎಂದಿದ್ದಾರೆ.

‘ಮತ್ಸ್ಯಗಂಧ’ ಚಿತ್ರದ ಮೂಲಕ ಗಮನ ಸೆಳೆದಿದ್ದ ದಿಶಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಸ್ವರೂಪಿಣಿ ನಾರಾಯಣ್ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಭೋಜಪುರಿ ಸೇರಿದಂತೆ ಏಳುಕ್ಕೂ ಹೆಚ್ಚು ಭಾಷೆಗಳಲ್ಲಿ ಚಿತ್ರವನ್ನು ಏಕಕಾಲದಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ. ಸದ್ಯ ಟೈಟಲ್ ಮೋಶನ್ ಪೋಸ್ಟರ್ ಮೂಲಕ ಕಥೆಯ ಸಣ್ಣ ಸುಳಿವು ನೀಡಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಟೀಸರ್ ಬಿಡುಗಡೆ ಮಾಡಲು ಯೋಜಿಸಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ, 2027ರ ಮಾರ್ಚ್ ವೇಳೆಗೆ ‘ಲಾರ್ಡ್ ಗಾಗ’ ಪ್ರೇಕ್ಷಕರ ಮುಂದೆ ಬರಲಿದೆ.