Home ಜಿಲ್ಲೆ ಕಾರಂಜಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ:ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಲ್ಲಿ ಮನವಿ

ಕಾರಂಜಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ:ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಲ್ಲಿ ಮನವಿ

ಬೀದರ, ಮೇ.16: ಬೇಸಿಗೆ ಕಾಲದಲ್ಲಿ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರಂಜಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಬಿ.ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ದಿನಾಂಕ: 04-05-2026 ರಂದು ನಡೆದ ಜಿಲ್ಲಾಧಿಕಾರಿಗಳ ಕಚೇರಿಯ ಸಭೆಯ ತೀರ್ಮಾನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕಲಬುರಗಿಯ ಪ್ರಾದೇಶಿಕ ಆಯುಕ್ತರ ಆದೇಶದನ್ವಯ ಜಲಾಶಯದಿಂದ ನೀರು ಹರಿಸಲು ನಿರ್ದೇಶನ ನೀಡಲಾಗಿದೆ.
ಕಾರಂಜಾ ಜಲಾಶಯದಿಂದ ದಿನಾಂಕ 16-05-2026 ರಿಂದ 06-06-2026 ರವರೆಗೆ ಕಾರಂಜಾ ಯೋಜನೆಯಡಿ ಬರುವ ಎಡದಂಡೆ, ಬಲದಂಡೆ, ಕಾರಂಜಾ ಏತ ನೀರಾವರಿ ಹಾಗೂ ಅತಿವಾಳ ಏತ ನೀರಾವರಿ ನಾಲೆಗಳ ಮೂಲಕ ಒಟ್ಟು 0.6 ಟಿ.ಎಂ.ಸಿ. ನೀರನ್ನು ಹಂತ-ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ.
ನಾಲೆಗಳಿಗೆ ನೀರು ಬಿಡುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಕಾಲುವೆಯ ಹತ್ತಿರ ಸಾರ್ವಜನಿಕರು ಯಾರೂ ಇಳಿಯುವುದಾಗಲಿ, ಬಟ್ಟೆ ಒಗೆಯುವುದು ಅಥವಾ ಈಜಾಡುವುದಾಗಲಿ, ಕಾಲುವೆಯ ನೀರಿನಲ್ಲಿ ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು. ಕಾರಣ ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸಿ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಬೀದರ ಕರ್ನಾಟಕ ನೀರಾವರಿ ನಿಗಮದ ನಿಯಮಿತದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.