
ಸತ್ತೂರು,ಏ22: ದೇವರಿಗೆ ಪ್ರೀತಿಕರವಾದ, ಸಾಧಕರಿಗೆ ಪುಣ್ಯಪ್ರದವಾದ ಮಾಸಗಳಲ್ಲಿ ವೈಶಾಖಮಾಸವೂ ಒಂದು. ಧರ್ಮಕಾರ್ಯಗಳಿಗೆ, ಭಗವತ್ ಪ್ರೀತಿಕರವಾದ ಅನುಷ್ಠಾನಾದಿಗಳಿಗೆ ಪ್ರಶಸ್ತವಾದ “ಅಕ್ಷಯತೃತೀಯಾ” ಉತ್ಸವವು ಬರುವುದು ಇದೇ ಮಾಸದಲ್ಲಿ. ಗಂಗೆಯು ಜಾಹ್ನವಿಯಾಗಿ ಉದಯಿಸಿದ್ದು ಇದೇ ವೈಶಾಖ ಮಾಸದ ಶುದ್ಧ ಸಪ್ತಮಿ ದಿನದಂದು. ಪರಮ ಭಕ್ತನಾದ ಪ್ರಹ್ಲಾದನ ಮಾತನ್ನು ಸತ್ಯ ಮಾಡಲು ಪರಮಾತ್ಮ ನರಸಿಂಹ ದೇವರಾಗಿ ಬಂದಿದ್ದು, ದುಷ್ಟರ ನಿಗ್ರಹಕ್ಕಾಗಿ ಪರಶುರಾಮ ದೇವರು ಅವತರಿಸಿದ್ದು, ಇದೇ ವೈಶಾಖಮಾಸದಲ್ಲಿ.
ಸಕಲ ಸಜ್ಜನರ ಉದ್ಧಾರಕ್ಕಾಗಿ ಅವತರಿಸಿದ ವೇದವ್ಯಾಸದೇವರ ಜಯಂತಿಯೂ ವೈಶಾಖಮಾಸದಲ್ಲಿ ಬರುತ್ತದೆ ಎಂದು ಡಾ. ಪ್ರಮೋದ ಆಚಾರ್ಯ ಚಂದಿಯವರು ಅಭಿಪ್ರಾಯಪಟ್ಟರು
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ರಾಜಾಜಿನಗರದಲ್ಲಿರುವ ರಘೋತ್ತಮ ಅವಧಾನಿಯವರ ನಿವಾಸದಲ್ಲಿ ಜರುಗಿದ ವೈಶಾಖ ಮಾಸದ ಮಹತ್ವ ಕುರಿತು ಉಪನ್ಯಾಸದಲ್ಲಿ ಮಾತನಾಡುತ್ತ, ಈ ವೈಶಾಖ ಮಾಸದಲ್ಲಿ ಭಗವಂತನ ಮೂರು ಅವತಾರಗಳಾದ ಪರುಶುರಾಮ, ನರಸಿಂಹದೇವರು ಮತ್ತು ವೇದವ್ಯಾಸ ದೇವರ ಜಯಂತಿಗಳು ಆಚರಣೆಗಳು ಈ ವೈಶಾಖ ಮಾಸದ ವಿಶೇಷ. ನಾವೆಲ್ಲರೂ ಸ್ನಾನ, ದಾನ, ಯಾಗ, ಕ್ರಿಯಾ, ಭೋಗ, ಮುಂತಾದವುಗಳಿಗೂ ನಾನಾ ಧರ್ಮಗಳ ಸಾಧನೆಗೂ ಅತ್ಯಂತ ಅನುಕೂಲಕರವಾದ ಮಾಸವೇ ವೈಶಾಖ ಮಾಸ. ಸೂರ್ಯೋದಯಕ್ಕಿಂತಲೂ ಮೊದಲೇ ಸ್ನಾನ, ದೇವರಿಗೆ ಗಂಧಲೇಪನ, ಜಲ, ಛತ್ರ, ಪಾದುಕಾ ಇತ್ಯಾದಿಗಳ ದಾನ, ಅತ್ಯಂತ ಶ್ರೇಷ್ಠವೆಂದು ಸ್ಕಾಂದ ಪುರಾಣವು ನಮಗೆ ತಿಳಿಸುತ್ತದೆ.
ಇಂತಹ ಸಾಧಕರಿಗೆ ಪುಣ್ಯ ಸಂಪಾದನೆಗೆ ಅತ್ಯಂತ ಪ್ರಶಸ್ತವಾದ ಕಾಲವಾದ ವೈಶಾಖಮಾಸದಲ್ಲಿ ಯಥೋಚಿತವಾದ ಅನುಷ್ಠಾನ, ದಾನ ಧರ್ಮಗಳಿಂದ ಪರಮಾತ್ಮನನ್ನು ಮೆಚ್ಚಿಸಿ ಕೃತಾರ್ಥರಾಗೋಣ ಎಂದು ಲೌಕಿಕ ಉದಾರಣೆಗಳೊಂದಿಗೆ ಸುಂದರವಾಗಿ ವಿಶ್ಲೇಷಿಸಿದರು.
ಕೃಷ್ಣ ಹುನಗುಂದ, ಡಾ. ಶ್ರೀನಾಥ ಡಾ. ರವಿ ಧುಮ್ಮವಾಡ, ಕೇಶವ ಕುಲಕರ್ಣಿ, ಶ್ರೀನಿವಾಸ ಪಟ್ಟಣಕೊಡಿ, ರಂಗನಾಥ ಕಟ್ಟಿ ನಾಗೇಶ ನರಸಾಪುರ, ಆನಂದ ದೇಶಪಾಂಡೆ,ಅನಿಲ ಪುರೋಹಿತ, ಎಲ್ ವಿ ಜೋಶಿ, ಪಾಂಡುರಂಗ ಕುಲಕರ್ಣಿ, ಭೀಮಸೇನ್ ದಿಗ್ಗಾವಿ, ರಾಘವೇಂದ್ರ ಮುಂಡಗೋಡ ವಿಲಾಸ ಸಬ್ನೀಸ, ಹನುಮಂತ ರಮೇಶ ಅಣ್ಣಿಗೇರಿ ಉಪಸ್ಥಿತರಿದ್ದರು.

























