
ಮಂಗಳೂರು-ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ “ಉಸ್ತುವಾರಿ ಕಚೇರಿ ಚಲೋ” ಪಾದಯಾತ್ರೆ ನಡೆಯಿತು. ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆ ಮುಂಭಾಗದಿಂದ ಪಾದಯಾತ್ರೆ ಪ್ರಾರಂಭವಾಯಿತು.
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿರುವ ಕರಾರು ಒಪ್ಪಂದ ರದ್ದುಗೊಳಿಸುವುದು, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ಆರಂಭಿಸುವುದು, ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೆತ್ತುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟರು. ಜೊತೆಗೆ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೂ ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಹಲವು ವರ್ಷಗಳಿಂದ ಸಂಘಟನೆ ಇಟ್ಟಿರುವ ಬೇಡಿಕೆಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ಆರೋಗ್ಯ ಇಲಾಖೆಯು ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಬದಲು ಖಾಸಗಿ ಆಸ್ಪತ್ರೆಗಳ ಲಾಭಿಗೆ ಮಣಿದಿದೆ ಎಂದು ಟೀಕಿಸಿದರು. ಸರ್ಕಾರವಾಗಲಿ, ವಿರೋಧ ಪಕ್ಷವಾಗಲಿ ಈ ವಿಚಾರದಲ್ಲಿ ಮೌನ ವಹಿಸಿರುವುದನ್ನು ಅವರು ಖಂಡಿಸಿದರು.
ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಜಿಲ್ಲೆಯಲ್ಲಿ ಹೃದಯ ಹಾಗೂ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಅಗತ್ಯತೆ ತುರ್ತಾಗಿದೆ ಎಂದರು. ಹೋರಾಟಗಳನ್ನು ಹತ್ತಿಕ್ಕಲು ಅನುಮತಿ ನಿರಾಕರಿಸಿದರೂ ಡಿವೈಎಫ್ಐ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ಪಾದಯಾತ್ರೆಗೆ ಹಿರಿಯ ವಿಚಾರವಾದಿ ನರೇಂದ್ರ ನಾಯಕ್ ಚಾಲನೆ ನೀಡಿದರು. ವೆನ್ಲಾಕ್ ಆಸ್ಪತ್ರೆಯಿಂದ ಆರಂಭವಾದ ಈ ನಡಿಗೆ ನಗರದ ವಿವಿಧ ಖಾಸಗಿ ಆಸ್ಪತ್ರೆಗಳ ಮುಂಭಾಗದಿಂದ ಸಾಗಿತು. ಉಸ್ತುವಾರಿ ಮಂತ್ರಿಗಳ ಕಚೇರಿ ತಲುಪುವ ಮುನ್ನವೇ ಪೊಲೀಸರು ಪಾದಯಾತ್ರೆಯನ್ನು ತಡೆಹಿಡಿಯಲು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಿಕ್ಕಾಟ ಉಂಟಾಗಿ, ಡಿವೈಎಫ್ಐ ನಾಯಕರೊಂದಿಗೆ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಬಂಧನದ ವೇಳೆ ಪ್ರತಿಭಟನಾಕಾರರು ದಿನೇಶ್ ಗುಂಡುರಾವ್ ಹಾಗೂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ರಿಜ್ವಾನ್ ಹರೇಕಳ, ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ಅಶ್ರಫ್ ಹರೇಕಳ, ರಜಾಕ್ ಮುಡಿಪು, ಹನೀಫ್ ಬೆಂಗರೆ, ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಬಿ.ಎಮ್ ಭಟ್, ಶಶಿಧರ್ ಶಕ್ತಿನಗರ, ಮಹಿಳಾ ಸಂಘಟನೆಯ ಮುಖಂಡರಾದ ಕಿರಣ ಪ್ರಭಾ, ಪ್ರಮಿಳಾ ಶಕ್ತಿನಗರ, ಅಸುಂತ ಡಿಸೋಜ, ರೋಹಿಣಿ ಜಲ್ಲಿಗುಡ್ಡೆ, ದಲಿತ ಹಕ್ಕುಗಳ ಸಮಿತಿಯ ಕೃಷ್ಣ ತಣ್ಣೀರುಬಾವಿ, ಕೃಷ್ಣ ಇನ್ನಾ, ಸಮುದಾಯದ ವಾಸುದೇವ ಉಚ್ಚಿಲ, ರಮೇಶ್ ಉಳ್ಳಾಲ, ಮಹಾಬಲ ಟಿ ದೆಪ್ಪೆಲಿಮಾರ್, ಶೇಖರ್ ಕುಂದರ್, ಇಬ್ರಾಹಿಂ ಮದಕ, ಅಬೂಬಕ್ಕರ್ ಜಲ್ಲಿ, ನಾಸಿರ್ ಬಾಸ್, ಬಿಲಾಲ್ , ಸುನೀಲ್ ತೇವುಲ, ಶ್ರೀನಾಥ್ ಕಾಟಿಪಳ್ಳ, ಮಕ್ಸೂದು ಸುರತ್ಕಲ್, ಅಜ್ಮಲ್ ಕಾನ, ತಸ್ರೀಫ್ ಬೆಂಗರೆ, ನೌಶದ್ ಬೆಂಗರೆ, ಯಶ್ ರಾಜ್ ಬಜಾಲ್, ದಿರಾಜ್ ಬಜಾಲ್, ದೀಪಕ್ ಬಜಾಲ್ , ವಿದ್ಯಾರ್ಥಿ ಸಂಘಟನೆಯ ವಿನುಶ ರಮಣ ಭಟ್, ಅಭಿಶೇಕ್ ಬೆಳ್ತಂಗಡಿ, ನಝೀರ್ ಕಕ್ಕಿಂಜೆ, ರಜಾಕ್ ಮೊಂಟೆಪದವು, ಸಂಕೇತ್ ಕುತ್ತಾರ್ , ಅಲೆಮಾರಿ ಸಮುದಾಯದ ವೆಂಕಟೇಶ್, ಲಕ್ಷ್ಮಣ ಮುಂತಾದವರು ಉಪಸ್ಥಿತರಿದ್ದರು.






















