Home ಜಿಲ್ಲೆ ಮಂಗಳೂರು ಆಂದ್ರದಲ್ಲಿ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯ ಬಂಧನ

ಆಂದ್ರದಲ್ಲಿ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯ ಬಂಧನ

ಸುಳ್ಯ:ಮಹಿಳೆಯೊಬ್ಬರನ್ನು ಕೊಂದು ಪೊಲೀಸರಿಂದ ತಲೆಮರೆಸಿಕೊಂಡಿದ್ದ ಸುಳ್ಯ ಅಜ್ಜಾವರ ಗ್ರಾಮದ ನಿವಾಸಿ ಅಬ್ದುಲ್ ಅಜೀಜ್ ಎಂಬಾತನನ್ನು ಕಡಬ ಪೊಲೀಸರು ಆಂಧ್ರಪ್ರದೇಶದಲ್ಲಿ ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.
೨೦೧೨ ಜನವರಿ ೩೧ರಂದು ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಅಮೈತಡ್ಕ ಎಂಬಲ್ಲಿ ರಸ್ತೆಯಲ್ಲಿರುವ ಮೋರಿಯೊಂದರ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಆಗಿನ ತನಿಖಾಧಿಕಾರಿಗಳಾಗಿದ್ದ ಎಂ.ಎನ್. ಅನುಚೇತ್ ಐ.ಪಿ.ಎಸ್ ಅವರು ಅಗತ್ಯ ಸಾಕ್ಷಿಗಳನ್ನು ಕಲೆ ಹಾಕಿ ಆರೋಪಿತನಾಗಿದ್ದ ಸುಳ್ಯ ಅಜ್ಜಾವರ ನಿವಾಸಿ ಎನ್.ಎಂ.ಅಬ್ದುಲ್ ಅಜೀಜ್ (೩೦) ಎಂಬಾತನ ವಿರುದ್ದ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ನ್ಯಾಯಾಧೀಶರಾದ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ವಿಜಯ್ ಕುಮಾರ್ ಎ. ಪಾಟೀಲ್ ರವರು ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಆರೋಪಿಗೆ ೧೦ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.೨,೦೦,೦೦೦/- ದಂಡವನ್ನು ಪಾವತಿಸುವಂತೆ ಅದೇಶ ನೀಡಿದ್ದರು. ಸರಕಾರಿ ಅಭಿಯೋಜಕರಾಗಿದ್ದ ಕೆ.ಪಿ.ಯಶೋದರವರು ನ್ಯಾಯಾಲಯದಲ್ಲಿ ಆರೋಪಿಯ ವಿರುದ್ಧ ವಾದಮಂಡನೆ ಮಾಡಿದ್ದರು.
ಆದರೆ ಅಪರಾಧಿಗೆ ಶಿಕ್ಷೆ ಪ್ರಕಟವಾದ ಬಳಿಕ ಆತ ಪೊಲೀಸರಿಂದ ತಲೆಮರೆಸಿಕೊಂಡು ಆಂಧ್ರಪ್ರದೇಶ ಇನ್ನಿತರ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ಕಡಬ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಜಂಬೂರಾಜ್ ಮಹಾಜನ್ ಮತ್ತು ಠಾಣಾ ಸಿಬ್ಬಂದಿಗಳು ಆತನನ್ನು ಆಂಧ್ರಪ್ರದೇಶದಲ್ಲಿ ಪತ್ತೆ ಹಚ್ಚಿ ಬಂಧಿಸಿ ಎಪ್ರಿಲ್ ೨೫ ರಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಪರಾಧಿಯನ್ನು ಶಿಕ್ಷೆಗೊಳಪಡಿಸಿ ಜೈಲಿಗಟ್ಟಲಾಗಿದೆ.