
ಬೆಂಗಳೂರು, ಅ.೩೧: ಮತ್ತೆ ಜಿಬಿಎ ಚುನಾವಣೆ ಮುಂದೂಡಲು ಸರ್ಕಾರದ ಯತ್ನ ನಡೆಸಿದ್ದು ಎಸ್ಐಆರ್ ಗೊಂದಲ ಮುಂದಿಟ್ಟು ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾಗಿದೆನಾಲ್ಕು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ, ಡಿಸೆಂಬರ್ ಅಂತ್ಯದೊಳಗೆ ನಡೆಸಬೇಕಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಮುಂದೂಡಲು ರಾಜ್ಯ ಸರ್ಕಾರ ಮತ್ತೆ ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳಿವೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ಜಿಬಿಎ ಚುನಾವಣೆ ನಡೆಸಲು ಅನುಮತಿ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ
ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಲು ಸೂಚನೆ:
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಡಿಸೆಂಬರ್ ಅಂತ್ಯದೊಳಗೆ ಯಾವುದೇ ನೆಪ ಹೇಳದೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆಗ ಸರ್ಕಾರದ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಚುನಾವಣೆ ಮುಂದೂಡುವಂತೆ ಮತ್ತೆ ಮನವಿ ಸಲ್ಲಿಸುವುದಿಲ್ಲ ಎಂಬ ಭರವಸೆ ನೀಡಿದ್ದರು ಎನ್ನಲಾಗಿದೆ.
ಆದರೆ, ಇದೀಗ ಎಸ್ಐಆರ್ ಪ್ರಕ್ರಿಯೆಯಲ್ಲಿನ ಗೊಂದಲಗಳನ್ನು ಮುಂದಿಟ್ಟುಕೊಂಡು ಚುನಾವಣೆ ಮುಂದೂಡಲು ಅವಕಾಶ ಕೋರುವ ಬಗ್ಗೆ ಸರ್ಕಾರ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದೆ. ಸೋಮವಾರ ಅಥವಾ ಮಂಗಳವಾರ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ಆಯುಕ್ತರ ಹಿಂದೇಟು:
ಚುನಾವಣೆ ಮುಂದೂಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ವಿಚಾರವಾಗಿ ರಾಜ್ಯ ಚುನಾವಣಾ ಆಯುಕ್ತರೊಂದಿಗೂ ಸರ್ಕಾರ ಚರ್ಚೆ ನಡೆಸಿದೆ ಎನ್ನಲಾಗಿದೆ. ಆದರೆ, ಈಗಾಗಲೇ ಚುನಾವಣಾ ಸಿದ್ಧತೆಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಚುನಾವಣೆ ಮುಂದೂಡಿಕೆ ಪ್ರಸ್ತಾವವನ್ನು ನ್ಯಾಯಾಲಯದ ಮುಂದೆ ಮಂಡಿಸಲು ಸಾಧ್ಯವಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಅಗತ್ಯವಿದ್ದರೆ ಸರ್ಕಾರವೇ ತನ್ನ ಕಡೆಯಿಂದ ಅರ್ಜಿ ಸಲ್ಲಿಸಬಹುದು ಎಂಬ ನಿಲುವನ್ನು ಆಯುಕ್ತರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರಿಂದಾಗಿ ಅಧಿಕಾರಿಗಳ ಮೂಲಕ ಅರ್ಜಿ ಸಲ್ಲಿಸುವ ಪ್ರಯತ್ನಕ್ಕೂ ಹಿನ್ನಡೆಯಾಗಿದೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್ ಅಸಮಾಧಾನಕ್ಕೆ ಗುರಿಯಾಗುವ ಆತಂಕದಿಂದ ಅಧಿಕಾರಿಗಳು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಮೂಲಕವೇ ಅರ್ಜಿ ಸಲ್ಲಿಸುವ ಸಾಧ್ಯತೆ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ವಿಧಾನ ಪರಿಷತ್ ಸೋಲು ಚುನಾವಣಾ ಲೆಕ್ಕಾಚಾರಕ್ಕೆ ಕಾರಣವೇ ಜಿಬಿಎ ಚುನಾವಣೆಯನ್ನು ಮುಂದೂಡಲು ಸರ್ಕಾರ ಮುಂದಾಗಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎಂಬ ಆರೋಪವೂ ಕೇಳಿಬಂದಿದೆ.
ಕಳೆದ ಆರು ವರ್ಷಗಳಿಂದ ಜಿಬಿಎ ವ್ಯಾಪ್ತಿಯ ನಗರಾಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ನಗರೋತ್ಥಾನ ಯೋಜನೆಯ ಅನುದಾನ ಸೇರಿದಂತೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬಾಕಿ ಉಳಿದಿದೆ ಎಂಬುದು ವರದಿಯಲ್ಲಿನ ಪ್ರಮುಖ ಅಂಶವಾಗಿದೆ. ಜಿಬಿಎ ಚುನಾವಣೆ ನಡೆಸಿ ಚುನಾಯಿತ ಆಡಳಿತ ವ್ಯವಸ್ಥೆ ಸ್ಥಾಪನೆಯಾದರೆ ಕೇಂದ್ರದ ಅನುದಾನ ಪಡೆಯುವ ಪ್ರಕ್ರಿಯೆಗೆ ವೇಗ ಸಿಗಬಹುದು ಎಂಬ ನಿರೀಕ್ಷೆಯೂ ಇದೆ.
ಆದರೆ, ಇತ್ತೀಚೆಗೆ ನಡೆದ ನಾಲ್ಕು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಿರುವ ಹಿನ್ನೆಲೆಯಲ್ಲಿ, ಐದು ನಗರ ಪಾಲಿಕೆಗಳ ಚುನಾವಣೆಯಲ್ಲೂ ಪ್ರತಿಕೂಲ ಫಲಿತಾಂಶ ಎದುರಾಗಬಹುದು ಎಂಬ ಆತಂಕದಿಂದ ಸರ್ಕಾರ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿರುವ ಸುಪ್ರೀಂ ಕೋರ್ಟ್, ಮತ್ತೊಮ್ಮೆ ಚುನಾವಣೆ ಮುಂದೂಡುವಂತೆ ಮನವಿ ಸಲ್ಲಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ. ಚುನಾವಣಾ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನ್ಯಾಯಾಲಯ ಮತ್ತಷ್ಟು ಕಟ್ಟುನಿಟ್ಟಿನ ನಿರ್ದೇಶನ ನೀಡಬಹುದು ಎಂಬ ನಿರೀಕ್ಷೆಯನ್ನು ಚುನಾವಣಾ ಆಯೋಗದ ಮೂಲಗಳು ವ್ಯಕ್ತಪಡಿಸಿವೆ.
ಒಟ್ಟಿನಲ್ಲಿ, ಎಸ್ಐಆರ್ ಪ್ರಕ್ರಿಯೆ, ಚುನಾವಣಾ ಸಿದ್ಧತೆ ಮತ್ತು ಸರ್ಕಾರದ ಕಾನೂನು ಪ್ರಯತ್ನಗಳ ನಡುವೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ನಿಗದಿತ ಗಡುವಿನೊಳಗೆ ನಡೆಯಲಿದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.
























