
ಬಳ್ಳಾರಿ, ಜೂ.೯ – ಕಲ್ಯಾಣ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಲಕ್ಷಾಂತರ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯವು ಮುಂಗಾರು ಮಳೆಯ ಆಗಮನದೊಂದಿಗೆ ಪುನರುಜ್ಜೀವನಗೊಂಡಿದೆ. ತೀವ್ರ ಬೇಸಿಗೆಯಿಂದಾಗಿ ಬತ್ತಿಹೋಗಿ ’ಡೆಡ್ ಸ್ಟೋರೇಜ್ ಸ್ಥಿತಿಗೆ ತಲುಪಿದ್ದ ಜಲಾಶಯಕ್ಕೆ ಈಗ ಜಲಾನಯನ ಪ್ರದೇಶದಿಂದ ಹೆಚ್ಚಿನ ಪ್ರಮಾಣದ ನೀರು ಬರುತ್ತಿದೆ.
ತುಂಗಭದ್ರಾ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ೧೦೧ ಟಿಎಂಸಿ, ಮತ್ತು ಪ್ರಸ್ತುತ ಜಲಾಶಯದಲ್ಲಿ ೧೦ ಟಿಎಂಸಿ ನೀರು ಸಂಗ್ರಹವಾಗಿದೆ. ಮುಂಗಾರು ಮಳೆ ಹೀಗೆ ಮುಂದುವರಿದರೆ, ಈ ವರ್ಷ ನಿಗದಿತ ಸಮಯಕ್ಕಿಂತ ಮೊದಲೇ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.
ಕಳೆದ ವರ್ಷ, ತೀವ್ರ ಬರಗಾಲದಿಂದ ಜಲಾಶಯ ಭರ್ತಿಯಾಗದ ಕಾರಣ ರೈತರು ತೊಂದರೆಯಲ್ಲಿದ್ದರು. ಆದರೆ ಈ ವರ್ಷ, ಮಳೆಗಾಲದ ಆರಂಭದಲ್ಲಿ ಜಲಾಶಯ ನೀರಿನಿಂದ ತುಂಬಿದ್ದು, ಇದು ಕಲ್ಯಾಣ ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳು ಮತ್ತು ಆಂಧ್ರ-ತೆಲಂಗಾಣ ಗಡಿ ಪ್ರದೇಶದ ರೈತರಿಗೆ ಹೆಚ್ಚಿನ ಸಂತೋಷ ತಂದಿದೆ.
ಈ ನೀರು ಮುಂಬರುವ ಬಿತ್ತನೆ ಮತ್ತು ಕೃಷಿ ಚಟುವಟಿಕೆಗಳಿಗೆ ವರದಾನವಾಗಲಿದ್ದು, ಕೃಷಿ ಜೀವನ ನಡೆಸುತ್ತಿರುವ ರೈತರ ಮುಖದಲ್ಲಿ ನಗು ತರಿಸಿದೆ. ಮಲೆನಾಡು ಮುಂತಾದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನೀರಿನ ಒಳಹರಿವು ಗಮನಾರ್ಹವಾಗಿ ಹೆಚ್ಚುತ್ತಿದೆ.




























