Home ಜಿಲ್ಲೆ ವಿದ್ಯುತ್ ಖಾಸಗೀಕರಣ ಕೈಬಿಡಲು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹ

ವಿದ್ಯುತ್ ಖಾಸಗೀಕರಣ ಕೈಬಿಡಲು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜೂ.23  ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡುವುದನ್ನು ಕೂಡಲೇ ಕೈಬಿಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ನೇತೃತ್ವದ ರೈತ ನಿಯೋಗ ಸೋಮವಾರ ಬೆಂಗಳೂರಿನ ವಸಂತ ನಗರದಲ್ಲಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ರಾಜ್ಯದ ವಿದ್ಯುಚ್ಚಕ್ತಿ ನಿಯಂತ್ರಣವನ್ನು ಟಾಟಾ ಪವರ್ ಕಂಪನಿಗೆ ನೀಡಬಾರದು ಎಂದು ಒತ್ತಾಯಿಸಿ ಮನವಿಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆ.ಎಂ.ವೀರಸಂಗಯ್ಯ, ರಾಜ್ಯದ ವಿದ್ಯುತ್ ಖಾಸಗೀಕರಣ ವಿರೋಧಿಸಿ, ಈವರೆಗೆ 15 ಲಕ್ಷ ಅರ್ಜಿಗಳು ಆಕ್ಷೇಪಣೆ ಸಲ್ಲಿಕೆಯಾಗಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದೊಂದು ಸೇವಾ ವಲಯವಾಗಿರುವುದರಿಂದ ರಾಜ್ಯದ ವಿದ್ಯುತ್ ನ್ನು ಯಾವುದೇ ಕಾರಣಕ್ಕೆ ಖಾಸಗೀಖರಣ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.

ರೈತರ ಆಕ್ಷೇಪಣೆಗಳನ್ನು ಪರಿಗಣಿಸಿ, ಸರ್ಕಾರ ವಿದ್ಯುತ್ ಖಾಸಗೀಕರಣದಿಂದ ಹಿಂದಕ್ಕೆ ಸರಿಯದಿದ್ದರೆ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ರಾಜ್ಯ ರೈತ ಸಂಘದಿಂದ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೆ.ದುರುಗೇಶ್, ಶ್ರೀನಾಥ ಜಿ., ಶಿವಪುತ್ರಪ್ಪ ಸೇರಿದಂತೆ ಮತ್ತಿತರರು ಇದ್ದರು.