
ಪಾವಗಡ, ಅ. ೨೬- ನಾಡು-ನುಡಿ ಹಾಗೂ ಜಾನಪದ ಸಂಸ್ಕೃತಿಯ ಸೌರಭವನ್ನು ಪಸರಿಸುವ ವಿಜಯದಶಮಿ ಹಾಗೂ ದಸರಾ ಮಹೋತ್ಸವದ ಪ್ರಯುಕ್ತ ಪಟ್ಟಣದ ಗುರುಭವನ ಪಕ್ಕದ ಆಟದ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಲಾ ವೈಭವ ಕಂಗೊಳಿಸಿತು.
ಶಮಿ ವೃಕ್ಷ ಅಭಿವೃದ್ಧಿ ಸಮಿತಿ ಹಾಗೂ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ದಸರಾ ಸಾಂಸ್ಕೃತಿಕ ಮಹೋತ್ಸವದಲ್ಲಿ, ’ದಿ. ವೆಂಕಟರಮಣಪ್ಪ ವೇದಿಕೆ’ಯಲ್ಲಿ ಪ್ರದರ್ಶನಗೊಂಡ ’ಕರಿಬಂಟನ ಕಾಳಗ’ ಪೌರಾಣಿಕ ಬಯಲಾಟ ಹಾಗೂ ’ಸಂಗೀತ ರಸಸಂಜೆ’ ಕಾರ್ಯಕ್ರಮಗಳು ಗಡಿಭಾಗದ ರಂಗರಸಿಕರನ್ನು ಹಾಗೂ ಸಾರ್ವಜನಿಕರನ್ನು ಕಲಾಪರವಶರನ್ನಾಗಿಸಿದವು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್ ವೈ. ರವಿ, ರಾಜ್ಯಾದ್ಯಂತ ದಸರಾ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ನಮ್ಮ ತಾಲ್ಲೂಕಿನಲ್ಲಿ ವಿಶೇಷವಾಗಿ ಗ್ರಾಮ ದೇವತೆಗಳ ಉತ್ಸವದೊಂದಿಗೆ ಮೆರವಣಿಗೆ ಸಾಗಿ ಅಂಬು ಹೊಡೆಯುವ ಈ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಕಳೆದ ಹತ್ತು ವರ್ಷಗಳಿಂದ ಜಂಬೂ ಸವಾರಿ ಪ್ರಯುಕ್ತ ಆಗಮಿಸುವ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಶಮಿ ವೃಕ್ಷ ಅಭಿವೃದ್ಧಿ ಸಮಿತಿ ಮತ್ತು ಸೇವಾ ಟ್ರಸ್ಟ್ ಕಾರ್ಯ ಅತ್ಯಂತ ಶ್ಲಾಘನೀಯ. ಅತ್ಯಾಧುನಿಕ ಡಿಜಿಟಲ್ ಯುಗದಲ್ಲೂ ದೇಶಿ ಕಲೆಗಳನ್ನು ಜೀವಂತವಾಗಿರಿಸಿರುವ ಈ ಪ್ರಯತ್ನ ಅಭಿನಂದನೀಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ. ಎಸ್. ವಿಶ್ವನಾಥ್ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಶಮಿ ವೃಕ್ಷ ಅಭಿವೃದ್ಧಿ ಸಮಿತಿ ಹಾಗೂ ಸೇವಾ ಟ್ರಸ್ಟ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಬ್ಬಕ್ಕೆ ಮೆರುಗು ನೀಡುತ್ತಿರುವುದು ಸಂತಸದ ವಿಷಯ. ಮುಂಬರುವ ದಿನಗಳಲ್ಲಿ ಈ ಹಬ್ಬದ ಅಂಗವಾಗಿ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ಸವಕ್ಕೆ ಇನ್ನಷ್ಟು ಕಳೆ ತರಬೇಕು ಎಂದು ಆಯೋಜಕರಿಗೆ ಸಲಹೆ ನೀಡಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ವೀರ್ಲಗೊಂದಿ ಡಿ. ನಾಗರಾಜು ರವರ ನೇತೃತ್ವದಲ್ಲಿ ಮೂಡಿಬಂದ ’ಕರಿಬಂಟನ ಕಾಳಗ’ ಪೌರಾಣಿಕ ಬಯಲಾಟವು ರಸಿಕರನ್ನು ಮಂತ್ರಮುಗ್ಧಗೊಳಿಸಿತು. ರಂಗಸ್ಥಳದಲ್ಲಿ ಬಾಲಕೃಷ್ಣನಾಗಿ ಎನ್. ವಿಶಾಲ್, ಕರಿರಾಯನಾಗಿ ದ್ಯಾವರಪ್ಪ, ರಕ್ಕಸರಾಗಿ ಉದ್ದಂಡಿ ರಾಮಮೂರ್ತಿ ಹಾಗೂ ಬೊಮ್ಮರಕ್ಕಸನಾಗಿ ಡಿ. ನಾಗರಾಜು ರೋಮಾಂಚಕ ಅಭಿನಯ ನೀಡಿದರು. ಪುಂಡರೀಕಾಕ್ಷಿಯಾಗಿ ಡಾ. ನರಸೇಗೌಡ, ಬನವಂತಾ ದೇವಿಯಾಗಿ ಶ್ರೀರಾಮಪ್ಪ, ಕಟಕಿ ಪಾತ್ರದಲ್ಲಿ ದವಡಬೆಟ್ಟ ಈರಣ್ಣ ಹಾಗೂ ಉರಿಸಿಂಗನಾಗಿ ಎನ್. ಮರಿಸ್ವಾಮಿ ತನ್ಮಯತೆಯಿಂದ ನಟಿಸಿದರು. ಹಿರಿಯ ಪತ್ರಕರ್ತ ಸತ್ಯ ಲೋಕೇಶ್ ಸಾರಥಿ ಪಾತ್ರದಲ್ಲಿ ಸಮಯೋಚಿತ ಹಾಸ್ಯದ ಮೂಲಕ ರಂಗ ಪ್ರಯೋಗಕ್ಕೆ ಮೆರುಗು ನೀಡಿದರೆ, ಹೊಟ್ಟೆ ಬೊಮ್ಮನಹಳ್ಳಿ ಹನುಮಂತರಾಯಪ್ಪ ಅವರ ಭಾಗವತಿಕೆ, ಶಿವಗಂಗಪ್ಪ ಅವರ ಮದ್ದಲೆ, ರಂಗನಾಥ್ ಅವರ ಮುಖವೀಣೆ ಹಾಗೂ ಹಿಮ್ಮೇಳದ ಹನುಮಂತರಾಯಪ್ಪ, ನರಸಪ್ಪ, ಗಂಗಾಧರ್, ಬಲರಾಮ್ ಅವರ ಗಾಯನ ಪ್ರದರ್ಶನಕ್ಕೆ ಜೀವತುಂಬಿತು. ಶಿವಣ್ಣ ಹಾಗೂ ನಂದೀಶ್ ಅವರ ವೇಷಭೂಷಣ ವಿನ್ಯಾಸ ಬಯಲಾಟದ ಭವ್ಯತೆಯನ್ನು ಹೆಚ್ಚಿಸಿತು. ಬಯಲಾಟ ಪ್ರದರ್ಶನವನ್ನು ಮೆಚ್ಚಿ ಶಮಿ ವೃಕ್ಷ ಸಮಿತಿಯ ಅಧ್ಯಕ್ಷರಾದ ನಾಗೇನಹಳ್ಳಿ ಪ್ರಭಾಕರ್ ಅವರು ವೀರ್ಲಗೂಂದಿ ಡಿ. ನಾಗರಾಜು ಮತ್ತು ತಂಡಕ್ಕೆ ನಗದು ಪಾರಿತೋಷಕ ನೀಡಿ ಗೌರವಿಸಿದರು
ಬಯಲಾಟದ ಜತೆಗೆ ಖ್ಯಾತ ಗಾಯಕ ಸಿಂಗರ್ ಮಂಜು ಹಾಗೂ ಪ್ರತಿಭಾ ಮೆಲೋಡೀಸ್ ತಂಡದಿಂದ ಏರ್ಪಡಿಸಲಾಗಿದ್ದ ಸಂಗೀತ ರಸಸಂಜೆ ಕಾರ್ಯಕ್ರಮವು ಸಾರ್ವಜನಿಕರನ್ನು ರಂಜಿಸಿತು.
ಇದೇ ವೇಳೆ ಶಮಿ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಿದ ವೇದಬ್ರಹ್ಮ ಅನಂತರಾಂ ಭಟ್, ತಹಶೀಲ್ದಾರ್ ವೈ. ರವಿ, ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ. ಎಸ್. ವಿಶ್ವನಾಥ್ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ವೇಲುರಾಜು ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲ ಕಲಾವಿದರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಮಿ ವೃಕ್ಷ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಸತ್ಯ ಲೋಕೇಶ್, ಅಧ್ಯಕ್ಷ ನಾಗೇನಹಳ್ಳಿ ಪ್ರಭಾಕರ್, ಸೇವಾ ಟ್ರಸ್ಟ್ ಅಧ್ಯಕ್ಷ ಮಾನಂ ಶಶಿಕಿರಣ್, ಪದಾಧಿಕಾರಿಗಳಾದ ಸುಪ್ರದೀಪ್, ವಿಶಾಲ್ ಪ್ರಜ್ವಲ್, ನವೀನ್ ಕುಮಾರ್, ಭರತ್ ಕುಮಾರ್, ಬೇಕರಿ ನಾಗರಾಜ್, ತಾಳೇಮರದಲ್ಲಿ ನರೇಶ್, ಅನಿಲ್ ಮಹದೇವ್, ಮಂಜುನಾಥ್ ಸೇರಿದಂತೆ ನೂರಾರು ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಒಟ್ಟಾರೆಯಾಗಿ, ಆಧುನಿಕತೆಯ ಅಲೆಯ ನಡುವೆಯೂ ಗಡಿಭಾಗದಲ್ಲಿ ದೇಶಿ ಜನಪದ ಕಲೆ ಮತ್ತು ಪೌರಾಣಿಕ ರಂಗಪರಂಪರೆಯನ್ನು ಜೀವಂತವಾಗಿರಿಸುವ ಶಮಿ ವೃಕ್ಷ ಅಭಿವೃದ್ಧಿ ಸಮಿತಿ ಹಾಗೂ ಸೇವಾ ಟ್ರಸ್ಟ್ನ ಈ ನಿರಂತರ ಶ್ರಮ ಸಾಂಸ್ಕೃತಿಕ ಮಹೋತ್ಸವಕ್ಕೆ ನಿಜವಾದ ಸಾರ್ಥಕತೆಯನ್ನು ತಂದುಕೊಟ್ಟಿತು. ಕಲಾಭಿಮಾನಿಗಳ ಅಪಾರ ಪ್ರೋತ್ಸಾಹ ಮತ್ತು ವೈಭವದ ಆಚರಣೆಯೊಂದಿಗೆ ಈ ಬಾರಿಯ ವಿಜಯದಶಮಿ ಸಾಂಸ್ಕೃತಿಕ ರಸಸಂಜೆ ಜನಮನದಲ್ಲಿ ಎಂದೆಂದಿಗೂ ಉಳಿಯುವಂತೆ ಯಶಸ್ವಿಯಾಗಿ ನೆರವೇರಿತು.
























