Home ಜಿಲ್ಲೆ ತುಮಕೂರು ಭದ್ರ ಅಭಯಾರಣ್ಯದಿಂದ ಗ್ರಾಮಸ್ಥರಿಗೆ ವಿವಿಧ ಸೌಲಭ್ಯ

ಭದ್ರ ಅಭಯಾರಣ್ಯದಿಂದ ಗ್ರಾಮಸ್ಥರಿಗೆ ವಿವಿಧ ಸೌಲಭ್ಯ

ತರೀಕೆರೆ. ನ. ೩- ಭದ್ರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ, ಚಿರತೆ, ಕಾಡಾನೆ, ಕಾಡುಕೋಣ, ಕಡವೆ, ಜಿಂಕೆ ಸೇರಿದಂತೆ ವಿವಿಧ ವನ್ಯಜೀವಿ ಹಾಗೂ ಪಕ್ಷಿಗಳ ಸಂತತಿ ಗಣನೀಯವಾಗಿ ಹೆಚ್ಚಳವಾಗಿರುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿಸ್ವಾರ್ಥ ಸೇವೆ ಹಾಗೂ ಕಟ್ಟುನಿಟ್ಟಿನ ಕಾರ್ಯನಿರ್ವಹಣೆಯೇ ಪ್ರಮುಖ ಕಾರಣ ಎಂದು ಭದ್ರ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಕೀತ್ ಮೀಣಾ ಹೇಳಿದರು.


ಭದ್ರ ವನ್ಯಜೀವಿ ವಿಭಾಗದ ತಣಿಗೆಬೈಲು ವಲಯ ಅರಣ್ಯ ಇಲಾಖೆ ವತಿಯಿಂದ ಜೈಪುರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಮಹಿಳಾ ಹೊಲಿಗೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ, ಅರ್ಹ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಹೊಲಿಗೆ ತರಬೇತಿ ಕಾರ್ಯವನ್ನು ವೀಕ್ಷಿಸಿ ಅವರು ಮಾತನಾಡಿದರು.


ಜೈಪುರ ಗ್ರಾಮದ ಮಹಿಳೆಯರಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರಿಗೂ ಈ ಕೇಂದ್ರದ ಮೂಲಕ ಹೊಲಿಗೆ ತರಬೇತಿ ನೀಡಲಾಗುವುದು. ಅಗತ್ಯವಿರುವ ಮಹಿಳೆಯರು ತರಬೇತಿಯ ಸದುಪಯೋಗ ಪಡೆದುಕೊಂಡು ಬಟ್ಟೆ ಹೊಲಿಯುವ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಇದರಿಂದ ತಮ್ಮ ಕುಟುಂಬದ ಆರ್ಥಿಕ ಅಭಿವೃದ್ಧಿಗೂ ನೆರವಾಗಲಿದೆ ಎಂದು ತಿಳಿಸಿದರು.


ಲಕ್ಕವಳ್ಳಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಸಾಗರ್ ಮಾತನಾಡಿ, ಭದ್ರ ವನ್ಯಜೀವಿ ಅರಣ್ಯ ವಿಭಾಗದ ವತಿಯಿಂದ ಗ್ರಾಮೀಣ ಪ್ರದೇಶದ ಜನರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಗ್ರಾಮಸ್ಥರಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ವಿತರಣೆ, ವಿವಿಧ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ, ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅಗತ್ಯ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.


ಇದರ ಜತೆಗೆ ವನ್ಯಜೀವಿಗಳ ವೀಕ್ಷಣೆ ಹಾಗೂ ಅವುಗಳ ಸಂರಕ್ಷಣೆಯ ಮಹತ್ವದ ಕುರಿತು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆ ಹಾಗೂ ವನ್ಯಜೀವಿ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ತಣಿಗೆಬೈಲು ವಲಯ ಅರಣ್ಯಾಧಿಕಾರಿ ಬಿ. ಸುಧಾಕರ್ ನಾಯ್ಕ್, ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಪಿ. ಪ್ರದೀಪ್ ಮತ್ತು ರಾಕೇಶ್, ಗಸ್ತು ಅರಣ್ಯ ಪಾಲಕ ಎಲ್.ಜಿ. ಪ್ರದೀಪ್, ಹೊಲಿಗೆ ತರಬೇತಿದಾರರು ಹಾಗೂ ಫಲಾನುಭವಿ ಮಹಿಳೆಯರು ಉಪಸ್ಥಿತರಿದ್ದರು.