Home ಮುಖಪುಟ ಸುದ್ದಿ ಕುಡಿಯುವ ನೀರಿಗೆ ಹಣದ ಕೊರತೆಯಿಲ್ಲ

ಕುಡಿಯುವ ನೀರಿಗೆ ಹಣದ ಕೊರತೆಯಿಲ್ಲ

ಬೆಂಗಳೂರು, ಜು. ೨೭- ರಾಜ್ಯದಲ್ಲಿ ಕುಡಿಯುವ ನೀರಿಗೆ ಹಣದ ಕೊರತೆಯಿಲ್ಲ. ಕುಡಿಯುವ ನೀರಿಗಾಗಿ ಈಗಾಗಲೇ ೨೨೪ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಹೇಳಿದರು.


ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಈಗಾಗಲೇ ವಿಭಾಗೀಯ ಮಟ್ಟದ ಪ್ರಕೃತಿ ವಿಕೋಪದ ಪರಿಶೀಲನಾ ಸಭೆ ನಡೆಸಲಾಗಿದೆ ಎಂದರು.


ಈ ಹಿಂದೆ ರಾಜ್ಯ ಸರ್ಕಾರ ಕುಡಿಯುವ ನೀರಿಗೆ ೧೧೭ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಈ ಬಾರಿ ಪ್ರತಿ ಕ್ಷೇತ್ರಕ್ಕೆ ೧ ಕೋಟಿಯಂತೆ ೨೨೪ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ. ಕುಡಿಯುವ ನೀರಿಗೆ ಹಣಕಾಸಿನ ತೊಂದರೆಯಿಲ್ಲ ಎಂದರು.


ಬರ ಪರಿಸ್ಥಿತಿ ಸಂದರ್ಭದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಖಾಸಗಿ ಕೊಳವೆ ಬಾವಿಯನ್ನು ಬಳಸಿಕೊಂಡು ಕುಡಿಯುವ ನೀರು ಒದಗಿಸುವಂತೆ ಸೂಚಿಸಿದ್ದೇವೆ ಎಂದರು.


ರಾಜ್ಯ ಸರ್ಕಾರ ಬರ ಪರಿಹಾರ ಕಾರ್ಯಗಳಿಗೆ ಆದ್ಯತೆ ಕೊಟ್ಟಿದೆ. ಹೆಚ್ಚಿನ ಅನುದಾನವನ್ನು ನೀಡಿದ್ದೇವೆ. ಯಾರೂ ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಧೈರ್ಯವನ್ನು ತುಂಬಿದೆ ಎಂದು ಅವರು ಹೇಳಿದರು.


ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೇಂದ್ರ ಸರ್ಕಾರದಿಂದ ೨೧೮೬ ಕೋಟಿ ರೂ. ಹಣ ಬಿಡುಗಡೆಯಾಗಬೇಕು. ಹಣ ಬಿಡುಗಡೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಮತ್ತೆ ರಾಜಕೀಯವಾಗಿ ಸ್ಪರ್ಧೆ ಮಾಡಬೇಕು ಎಂಬುದು ನನ್ನ ಮನವಿ ಎಂದರು.