Home ಜಿಲ್ಲೆ ತುಮಕೂರು ಯುವ ಪೀಳಿಗೆಗೆ ಅಂಬೇಡ್ಕರ್ ವಿಚಾರಧಾರೆ ತಿಳಿಸುವುದೇ ಸಂಘಟನೆ ಉದ್ದೇಶ: ಕೃಷ್ಣ

ಯುವ ಪೀಳಿಗೆಗೆ ಅಂಬೇಡ್ಕರ್ ವಿಚಾರಧಾರೆ ತಿಳಿಸುವುದೇ ಸಂಘಟನೆ ಉದ್ದೇಶ: ಕೃಷ್ಣ

ತುಮಕೂರು, ಅ. ೧೭- ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಹಾಗೂ ಸಾಮಾಜಿಕ ಸಮಾನತೆಯ ವಿಚಾರಗಳನ್ನು ಯುವ ಪೀಳಿಗೆಗೆ ತಲುಪಿಸುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶ ಎಂದು ಸಂಘದ ಅಧ್ಯಕ್ಷ ಕೃಷ್ಣ ಹೇಳಿದರು.


ನಗರದಲ್ಲಿ ಪರಿವರ್ತನಾ ಕಲಾ ಮತ್ತು ಕ್ರೀಡಾ ಯುವಕರ ಸಂಘ ಹಾಗೂ ಸಾಮಾಜಿಕ ನ್ಯಾಯ ವೇದಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಡಾ.ಬಿ. ಆರ್. ಅಂಬೇಡ್ಕರ್ ರವರ ೭೦ನೇ ಧರ್ಮ ದೀಕ್ಷಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಸಂಘದ ಕಾರ್ಯದರ್ಶಿ ಮೋಹನ್ ಟಿ.ಆರ್. ಮಾತನಾಡಿ, “ಧರ್ಮ ದೀಕ್ಷಾ ದಿನವು ಕೇವಲ ಒಂದು ಐತಿಹಾಸಿಕ ದಿನವಲ್ಲ, ಅದು ಸಾಮಾಜಿಕ ಪರಿವರ್ತನೆ ಮತ್ತು ಮಾನವ ಘನತೆಯ ಸಂಕೇತವಾಗಿದೆ. ನಮ್ಮ ಸಂಘಟನೆಯು ಕ್ರೀಡೆ, ಕಲೆ ಹಾಗೂ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಯುವಕರನ್ನು ಸಂಘಟಿಸಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದೆ ಎಂದರು.


ಇದೇ ಸಂದರ್ಭದಲ್ಲಿ ರಾಘವೇಂದ್ರ ಜಿ. ಪಾಟೀಲ ಅವರಿಗೆ ಪರಿವರ್ತನಾ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಘವೇಂದ್ರ ಜಿ. ಪಾಟೀಲ, “ಪರಿವರ್ತನಾ ಕಲಾ ಮತ್ತು ಕ್ರೀಡಾ ಯುವಕರ ಸಂಘ ಹಾಗೂ ಸಾಮಾಜಿಕ ನ್ಯಾಯ ವೇದಿಕೆಯ ವತಿಯಿಂದ ನನಗೆ ’ಪರಿವರ್ತನಾ ಸಮಾಜ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿರುವುದು ನನಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆಯನ್ನು ತಂದಿದೆ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ೭೦ನೇ ಧರ್ಮ ದೀಕ್ಷಾ ದಿನದಂತಹ ಪವಿತ್ರ ಹಾಗೂ ಐತಿಹಾಸಿಕ ದಿನದಂದು ಈ ಸನ್ಮಾನ ದೊರೆತಿರುವುದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜಮುಖಿ ಕೆಲಸಗಳಿಗೆ ಸಿಗುವ ಇಂತಹ ಪ್ರೋತ್ಸಾಹಗಳು ನಿಸ್ಸ್ವಾರ್ಥ ಸೇವೆಯನ್ನು ಮುಂದುವರಿಸಲು ದೊಡ್ಡ ಶಕ್ತಿಯಾಗುತ್ತವೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೊಡ್ಡ ಚಿಕ್ಕಣ್ಣ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ತೋರಿದ ಅಹಿಂಸೆ, ಸಮಾನತೆ ಹಾಗೂ ಪ್ರಜ್ಞಾವಂತ ಸಮಾಜದ ನಿರ್ಮಾಣದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪರಿವರ್ತನಾ ಸಂಘಟನೆಯು ಈ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.


ಸಂಘದ ವತಿಯಿಂದ ಏರ್ಪಡಿಸಿದ್ದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳಿಗೆ ಮುಖ್ಯ ಅತಿಥಿಗಳಿಂದ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಹೇಶ್ ಜೆ ವೈದ್ಯಕೀಯ ವಿದ್ಯಾರ್ಥಿ, ಹಾಗೂ ವಂದನಾರ್ಪಣೆಯನ್ನು ಕುಮಾರಿ ಲಕ್ಷ್ಮಿ ನಡೆಸಿಕೊಟ್ಟರು
ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು, ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ರಂಗಮ್ಮ ಮತ್ತಿತರರು ಭಾಗವಹಿಸಿದ್ದರು.