
ಆಳಂದ: ಭಾವೈಕ್ಯತೆ, ಸೌಹಾರ್ದತೆ ಹಾಗೂ ಸೂಫಿ ಪರಂಪರೆಯ ಪ್ರತೀಕವಾಗಿರುವ ಪಟ್ಟಣದ ಹಜರತ್ ಲಾಡ್ಲೆ ಮಶಾಕ್ ಅನ್ಸಾರಿ ಅವರ 671ನೇ ಉರುಸ್ ನಿಮಿತ್ತ ಮಂಗಳವಾರ ನಡೆದ ಗಂಧೋತ್ಸವ ಅದ್ಧೂರಿ ವೈಭವಕ್ಕೆ ಸಾಕ್ಷಿಯಾಯಿತು.
ಗಂಧೋತ್ಸವದ ಅಂಗವಾಗಿ ಹಳೆಯ ತಹಸೀಲ್ದಾರ್ ಕಚೇರಿಯಿಂದ ಪಟ್ಟಣದ ಪ್ರಮುಖ ರಸ್ತೆ ಮಾರ್ಗವಾಗಿ ಹಜರತ್ ಲಾಡ್ಲೆ ಮಶಾಕ್ ದರ್ಗಾವರೆಗೆ ನಡೆದ ಮೆರವಣಿಗೆಯಲ್ಲಿ ಖವಾಲಿ, ಭಕ್ತಿಗೀತೆ, ಪ್ರಾರ್ಥನೆ ಹಾಗೂ ವಿವಿಧ ವಾದ್ಯಗಳ ನಾದ ಮೊಳಗಿತು. ತೆರೆದ ಲಾರಿಯಲ್ಲಿ ಪ್ರಸಿದ್ಧ ಕಲಾವಿದರು ಖವಾಲಿ ಹಾಡುವ ಮೂಲಕ ಭಕ್ತರನ್ನು ರಂಜಿಸಿದರು. ಸಾಂಪ್ರದಾಯಿಕ ಹಾಗೂ ಸಾಂಸ್ಕøತಿಕ ನೃತ್ಯಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಸಾವಿರಾರು ಭಕ್ತರ ಜಯಘೋಷದ ನಡುವೆ ಮೆರವಣಿಗೆ ಸಡಗರ, ಸಂಭ್ರಮದಿಂದ ದರ್ಗಾ ತಲುಪಿತು.
ಗಂಧೋತ್ಸವಕ್ಕೆ ಮುನ್ನ ತಾಲೂಕು ಆಡಳಿತ ಸಭಾಂಗಣದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಅವರು ಪೂಜೆ ನೆರವೇರಿಸಿ ದರ್ಗಾದ ಕಾರಬಾರಿ ಸಾಧತ್ ಅನ್ಸಾರಿ ಅವರನ್ನು ಗಂದವನ್ನು ವಿತರಿಸಿ ಮೆರವಣಿಗೆ ಚಾಲನೆ ನೀಡಿದರು. ದರು. ಇದಕ್ಕೂ ಮುನ್ನ ಕಲಾವಿದರಿಂದ ನಡೆದ ಆಕರ್ಷಕ ಖವಾಲಿ ಕಾರ್ಯಕ್ರಮ ಭಕ್ತರ ಗಮನ ಸೆಳೆಯಿತು.
ಕಣ್ಮನ ಸೆಳೆಯುವ ದೀಪಾಲಂಕಾರ:
ಏμÁ್ಯ ಖಂಡದಲ್ಲೇ ಅತ್ಯಂತ ವಿಶಾಲ ದರ್ಗಾ ಆವರಣ ಹೊಂದಿದೆ ಎಂದು ಪ್ರಸಿದ್ಧಿ ಪಡೆದಿರುವ ಹಜರತ್ ಲಾಡ್ಲೆ ಮಶಾಕ್ ದರ್ಗಾ ಹಾಗೂ ಚಾರ್ಮಿನಾರ್ ಆವರಣವು ಉರುಸ್ ಹಿನ್ನೆಲೆಯಲ್ಲಿ ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ರಾತ್ರಿ ವೇಳೆಯಲ್ಲಿ ದೀಪಗಳ ಬೆಳಕಿನಲ್ಲಿ ದರ್ಗಾ ಆವರಣ ಕಂಗೊಳಿಸುತ್ತಿದ್ದು, ಉರುಸ್ನ ಸಡಗರಕ್ಕೆ ಮತ್ತಷ್ಟು ಮೆರುಗು ತಂದಿದೆ.
ಬೃಹತ್ ಬಜಾರ್ಗೆ ಕಳೆ:
ಉರುಸ್ ಅಂಗವಾಗಿ ಪಟ್ಟಣದಲ್ಲಿ ಬೃಹತ್ ಬಜಾರ್ ಕೂಡ ಕಳೆಗಟ್ಟಿದೆ. 71ಕ್ಕೂ ಹೆಚ್ಚು ಅಂಗಡಿ ಮುಗ್ಗಟ್ಟುಗಳು, ಬಣ್ಣಬಣ್ಣದ ಆಟಿಕೆಗಳು, ವಿವಿಧ ಸಾಮಗ್ರಿಗಳ ಮಳಿಗೆಗಳು ಹಾಗೂ ವ್ಯಾಪಾರ ಮಳಿಗೆಗಳು ಜನರನ್ನು ಆಕರ್ಷಿಸುತ್ತಿವೆ. ಹೊರ ಜಿಲ್ಲೆ ಹಾಗೂ ವಿವಿಧ ಪ್ರದೇಶಗಳಿಂದ ಆಗಮಿಸಿರುವ ಭಕ್ತರು ಉರುಸ್ ಸಂಭ್ರಮದ ಜತೆಗೆ ಖರೀದಿಯಲ್ಲಿ ತೊಡಗಿದ್ದರಿಂದ ವ್ಯಾಪಾರ ವಹಿವಾಟು ಕೂಡ ಚುರುಕುಗೊಂಡಿದೆ.
ವಿವಿಧ ರಾಜ್ಯಗಳಿಂದ ಭಕ್ತರ ಆಗಮನ:
ಹಜರತ್ ಲಾಡ್ಲೆ ಮಶಾಕ್ ಅವರ 671ನೇ ಉರುಸ್ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಸೂಫಿ-ಸಂತನ ಭಕ್ತರು ಆಳಂದಕ್ಕೆ ಆಗಮಿಸಿದ್ದಾರೆ. ಭಕ್ತರ ಆಗಮನದಿಂದ ಪಟ್ಟಣದಾದ್ಯಂತ ಉರುಸ್ನ ಸಂಭ್ರಮ ಮನೆಮಾಡಿದೆ.
ದರ್ಗಾ ಕಮಿಟಿ ಅಧ್ಯಕ್ಷ ಆಫಿಜ್ ಇದ್ರೀಸ್ ಅನ್ಸಾರಿ, ಉಪಾಧ್ಯಕ್ಷ ನೋಹಿದ್ ಅನ್ಸಾರಿ, ಯುನೂಸ್ ಅನ್ಸಾರಿ, ಖಮುರೋದ್ದೀನ್ ಅನ್ಸಾರಿ, ಕಾರ್ಯದರ್ಶಿ ರಬ್ಬಾನಿ ಅನ್ಸಾರಿ, ಖಜಾಂಚಿ ಮಜರ್ ಅನ್ಸಾರಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಗೂ ಭಕ್ತರ ಸಾಮೂಹಿಕ ಸಹಭಾಗಿತ್ವದಲ್ಲಿ ಗಂಧೋತ್ಸವವು ಸಡಗರದಿಂದ ನಡೆಯಿತು.
ಸೆ.22ರಿಂದ ಆರಂಭಗೊಂಡಿರುವ ಉರುಸ್ ಅಂಗವಾಗಿ ಸೆ.23ರಂದು ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಉರುಸ್ ಹಿನ್ನೆಲೆಯಲ್ಲಿ ಪಟ್ಟಣವು ಭಕ್ತಿ, ಸೌಹಾರ್ದತೆ ಹಾಗೂ ಸಾಂಸ್ಕøತಿಕ ವೈಭವದ ಸಂಭ್ರಮದಲ್ಲಿ ಮಿಂದೇಳುತ್ತಿದೆ.






















