Home Lead News ನೀಟ್ ಕಿಚ್ಚು ಹೋರಾಟ ತೀವ್ರ

ನೀಟ್ ಕಿಚ್ಚು ಹೋರಾಟ ತೀವ್ರ

ನವದೆಹಲಿ,ಜು.೨೨- ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ಕಿಚ್ಚು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇಂದು ಕೂಡ ಕಾಕ್ರೋಚ್ ಪಾರ್ಟಿ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಪ್ರಮುಖ ರೈಲ್ವೆ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು ಸೇರಿದಂತೆ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.


ಕಾಂಗ್ರೆಸ್ ಪಕ್ಷ ಸಹ ವಿದ್ಯಾರ್ಥಿಗಳ ಪ್ರತಿಭಟನೆ ಬೆಂಬಲಿಸಿ ಸಂಸತ್ ಭವನದ ಮುಂದೆ ಪ್ರತಿಭಟನಾ ಧರಣಿ ನಡೆಸಿದ್ದು, ಕಾಂಗ್ರೆಸ್‌ನ ಸಂಸದರ ಕಪ್ಪು ವಸ್ತ್ರ ಧರಿಸಿ, ಪ್ರತಿಭಟನೆ ನಡೆಸಿದ್ದಾರೆ.


ವಿದ್ಯಾರ್ಥಿಗಳ ಈ ಸುದೀರ್ಘ ಹೋರಾಟವು ದೇಶದ ರಾಜಧಾನಿ ದೆಹಲಿಯಲ್ಲಿ ಅತ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಮಾಡಿದೆ. ’ಸಂಸತ್ ಚಲೋ’ ಮೆರವಣಿಗೆಯ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಭವಿಸಿದ ತೀವ್ರ ಘರ್ಷಣೆಯಲ್ಲಿ ೧೧೮ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹಾಗೂ ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಉಳಿದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ೨೦ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂಗೊಂಡ ಹಿನ್ನೆಲೆಯಲ್ಲಿ, ನವದೆಹಲಿ ವ್ಯಾಪ್ತಿಯಲ್ಲಿ ಅಭೂತಪೂರ್ವ ಭದ್ರತಾ ಬಂದೋಬಸ್ತ್ ಕೈಗೊಳ್ಳಲಾಗಿದೆ.


ಇತರ ರಾಜ್ಯಗಳಿಂದ ದೆಹಲಿಗೆ ಪ್ರತಿಭಟನಾಕಾರರು ಸಾಲಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನವದೆಹಲಿ, ದೆಹಲಿ ಕ್ಯಾಂಟ್, ಆನಂದ್ ವಿಹಾರ್, ಹಜರತ್ ನಿಜಾಮುದ್ದೀನ್ ಮತ್ತು ಹಳೆಯ ದೆಹಲಿ ರೈಲ್ವೆ ನಿಲ್ದಾಣಗಳಲ್ಲಿ ದೆಹಲಿ ಪೊಲೀಸರು ಹಾಗೂ ರೈಲ್ವೆ ಸುರಕ್ಷತಾ ಪಡೆ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿವೆ. ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಂಡುಬಂದರೆ ತಕ್ಷಣವೇ ದೆಹಲಿ ಪೊಲೀಸ್ ಕೇಂದ್ರ ಕಚೇರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಇದರ ಜೊತೆಗೆ ಜಂತರ್ ಮಂತರ್ ತಲುಪುವ ಮಾರ್ಗಗಳಾದ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಪಟೇಲ್ ಚೌಕ್ ಮತ್ತು ಬಾರಾಖಂಬಾ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.


ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಕೈತಪ್ಪದಂತೆ ತಡೆಯಲು ಕೇಂದ್ರ ಗೃಹ ಸಚಿವಾಲಯವು ತುರ್ತು ಕ್ರಮ ಕೈಗೊಂಡಿದೆ. ಪಶ್ಚಿಮ ಬಂಗಾಳದಲ್ಲಿದ್ದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ೨೦ ಹೆಚ್ಚುವರಿ ಕಂಪನಿಗಳನ್ನು (ಸುಮಾರು ೨,೦೦೦ಕ್ಕೂ ಹೆಚ್ಚು ಸೈನಿಕರು) ವಿಶೇಷ ವಿಮಾನಗಳ ಮೂಲಕ ತಕ್ಷಣವೇ ದೆಹಲಿಗೆ ಕರೆಸಿಕೊಂಡು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.


ಜುಲೈ ೨೧ರ ಮಂಗಳವಾರದಂದು ನವದೆಹಲಿಯಲ್ಲಿ ರಾಜಕೀಯ ಹೈಡ್ರಾಮಾ ನಡೆದಿದೆ. ಜುಲೈ ೨೦ರಂದು ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಧಾನಿ ನರೇಂದ್ರ ಮೋದಿ ಅವರ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಅಧಿಕೃತ ನಿವಾಸದ ಹೊರಭಾಗದಲ್ಲಿ ಧರಣಿ ಕುಳಿತರು. ಪೊಲೀಸರು ತಕ್ಷಣವೇ ಇವರನ್ನು ವಶಕ್ಕೆ ಪಡೆದು, ಸಂಜೆ ವೇಳೆಗೆ ಬಿಡುಗಡೆ ಮಾಡಿದರು.


ಸಂಸತ್ತಿನಲ್ಲಿ ಕಪ್ಪು ಉಡುಪು ಧರಿಸಿ ಪ್ರತಿಭಟನೆ


ಬುಧವಾರ ಬೆಳಿಗ್ಗೆ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆ, ಇಂಡಿಯಾ ಕೂಟದ ಸಂಸದರು ಸಂಸತ್ತಿನ ಆವರಣದ ಮಕರ ದ್ವಾರದ ಬಳಿ ಕಪ್ಪು ಉಡುಪು ಧರಿಸಿ ಭಾರಿ ಪ್ರತಿಭಟನೆ ನಡೆಸಿದರು. ಲೋಕಸಭೆಯಲ್ಲಿ ನೀಟ್ ಅಕ್ರಮಗಳ ಕುರಿತು ತಕ್ಷಣವೇ ಚರ್ಚೆಗೆ ಅವಕಾಶ ನೀಡಬೇಕು ಹಾಗೂ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಘೋಷಣೆಗಳನ್ನು ಕೂಗಿದರು.


ದೆಹಲಿ ಪೊಲೀಸರು ಈವರೆಗೆ ಪ್ರತಿಭಟನೆಗೆ ಸಂಬಂಧಿಸಿದಂತೆ ೧೦ ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಪಾರ್ಲಿಮೆಂಟ್ ಸ್ಟ್ರೀಟ್ (೪), ಕನೆಕ್ಟ್ ಪ್ಲೇಸ್ (೩), ಮಂದಿರ ಮಾರ್ಗ (೧), ಬಾರಾಖಂಬಾ ರಸ್ತೆ (೧) ಮತ್ತು ಕರ್ತವ್ಯ ಪಥ (೧) ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಮಂಗಳವಾರ ರಾತ್ರಿ ನವದೆಹಲಿಯಲ್ಲಿ ಭದ್ರತೆಯಲ್ಲಿದ್ದ ರ್‍ಯಾಪಿಡ್ ಆಕ್ಷನ್ ಫೋರ್ಸ್ ಸಿಬ್ಬಂದಿಯ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ ವೀಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಮತ್ತೊಂದು ಕಟ್ಟುನಿಟ್ಟಿನ ಎಫ್‌ಐಆರ್ ದಾಖಲಿಸಲಾಗಿದೆ.


“ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ ಜುಲೈ ೨೦ರಂದು ನಡೆದದ್ದು ಕೇವಲ ಟ್ರೇಲರ್ ಅಷ್ಟೇ. ಸರ್ಕಾರ ತಕ್ಷಣವೇ ನೀಟ್ ಅಕ್ರಮಗಳ ಕುರಿತು ಕ್ರಮ ಕೈಗೊಳ್ಳದಿದ್ದರೆ ಮತ್ತು ಶಿಕ್ಷಣ ಸಚಿವರು ರಾಜೀನಾಮೆ ನೀಡದಿದ್ದರೆ ದೇಶದಾದ್ಯಂತ ಇರುವ ಕೋಟ್ಯಂತರ ಯುವಕರು ದೆಹಲಿಗೆ ಆಗಮಿಸಲಿದ್ದಾರೆ. ನಾವು ಈ ಬಾರಿ ಸುಮ್ಮನೆ ಹಿಂತಿರುಗುವುದಿಲ್ಲ.”


ದೆಹಲಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ


ಪ್ರತಿಭಟನೆಯ ಮಧ್ಯೆ ಪ್ರಮುಖ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ದೆಹಲಿ ಪೊಲೀಸರು ಜುಲೈ ೧೮ರಂದು ಬಲವಂತವಾಗಿ ಅಂತ್ಯಗೊಳಿಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಮತ್ತು ಲಾಠಿಚಾರ್ಜ್ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಇಂದು ನಡೆಸಲಿದೆ. ಸ್ವತಂತ್ರ ನ್ಯಾಯಾಂಗ ತನಿಖೆಗೆ ಕೋರಿ ಈ ಅರ್ಜಿ ಸಲ್ಲಿಕೆಯಾಗಿದೆ.

ಜಂತರ್ ಮಂತರ್‌ನಲ್ಲಿ ೩೨ನೇ ದಿನಕ್ಕೆ ಕಾಲಿಟ್ಟ ಸಿಜೆಪಿ ಪ್ರತಿಭಟನೆ

  • ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರ ಬಂಧನ, ಬಿಡುಗಡೆ
  • ಸಿಆರ್‌ಪಿಎಫ್‌ನ ೨೦ ಹೆಚ್ಚುವರಿ ತುಕಡಿ ನಿಯೋಜನೆ

ಪ್ರಧಾನ್ ರಾಜೀನಾಮೆ ನೀಡಿದರಷ್ಟೆ ಚರ್ಚೆ


ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರವರು ರಾಜೀನಾಮೆ ನೀಡುವವರೆಗೂ ರಾಜ್ಯಸಭೆಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಚರ್ಚೆಗಳನ್ನು ನಡೆಸದಿರಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.


ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನಖರ್ಗೆ ಅವರು ಇಂದು ಬೆಳಗ್ಗೆ ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ರಾಧಾಕೃಷ್ಣ ಅವರನ್ನು ಭೇಟಿ ಮಾಡಿ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡುವವರೆಗೂ ಸದನದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಚರ್ಚೆಗಳನ್ನು ನಡೆಸುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.


ರಾಜ್ಯಸಭೆಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಇಂದು ಚರ್ಚೆಗಳು ನಡೆಯಬೇಕಿತ್ತು .ಆದರೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವರೆಗೂ ಚರ್ಚೆಗಳು ನಡೆಸಲ್ಲ ಎಂದು ಮಲ್ಲಿಕಾರ್ಜುನಖರ್ಗೆ ರಾಜ್ಯಸಭೆ ಸಭಾಪತಿ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.