Home Lead News ಸಂಪುಟ ವಿಸ್ತರಣೆ ದೆಹಲಿಯಲ್ಲಿ ಸಭೆ

ಸಂಪುಟ ವಿಸ್ತರಣೆ ದೆಹಲಿಯಲ್ಲಿ ಸಭೆ

ಬೆಂಗಳೂರು, ಜು. ೨೧- ರಾಜ್ಯ ಸಚಿವ ಸಂಪುಟ ವಿಸ್ತರಣೆ ಸನ್ನಿಹಿತವಾಗಿದ್ದು, ೩-೪ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುವುದು ಬಹುತೇಕ ನಿಶ್ಚಿತ.


ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಲು ಹಾಗೂ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್ ಹೈಕಮಾಂಡ್‌ನ ಬುಲಾವ್ ಮೇರೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇವರುಗಳು ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.


ಇಂದು ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್‌ನ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ.


ಇಂದಿನ ಸಭೆಯಲ್ಲಿ ಕಾಂಗ್ರೆಸ್ ವರಿಷ್ಠ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಇವರೆಲ್ಲಾ ಭಾಗಿಯಾಗಲಿದ್ದು, ಸಚಿವರ ಪಟ್ಟಿಗೆ ಇಂದೇ ಮೋಕ್ಷ ಸಿಗುವ ಸಾಧ್ಯತೆಗಳು ಹೆಚ್ಚಿವೆ.


ರಾಜ್ಯ ಸಚಿವ ಸಂಪುಟದಲ್ಲಿ ೨೦ ಸ್ಥಾನಗಳು ಖಾಲಿ ಇದ್ದು, ಆ ಸ್ಥಾನಗಳಿಗೆ ೩೫ ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಹಾಗಾಗಿ ಸಚಿವರ ಪಟ್ಟಿ ಅಂತಿಮಗೊಳಿಸುವುದು ವರಿಷ್ಠರಿಗೆ ತಲೆ ನೋವು ತಂದಿದ್ದು, ಇದರ ಜತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸಹ ತಮ್ಮ ಕಟ್ಟಾ ಬೆಂಬಲಿಗ ಶಾಸಕರಿಗೂ ಸಚಿವ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದು, ಸಚಿವರ ಪಟ್ಟಿ ಅಂತಿಮಗೊಳಿಸುವುದು ಗಜ ಪ್ರಸವದಂತಾಗಿದೆ.


ಕಳೆದ ವಾರ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಜತೆ ವರಿಷ್ಠರು ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ಒಂದು ಸುತ್ತಿನ ಚರ್ಚೆ ನಡೆಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ಪುತ್ರನ ಆರೋಗ್ಯದಲ್ಲಿ ಏರುಪೇರಾದ ಕಾರಣ ಖರ್ಗೆ ಅವರು ಸಭೆಯನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದರು. ಹಾಗಾಗಿ ಸಚಿವರ ಪಟ್ಟಿ ತಯಾರಿಸುವ ಚರ್ಚೆಯ ಸಭೆ ಅಪೂರ್ಣಗೊಂಡಿತ್ತು. ಇದಾದ ಬಳಿಕ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಅವರು ಖರ್ಗೆ ಅವರು ದೆಹಲಿಗೆ ಬಂದ ನಂತರ ಬುಲಾವ್ ಕಳುಹಿಸುತ್ತೇನೆ ಮುಂದಿನ ವಾರ ಬನ್ನಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸೋಣ ಎಂದು ರಾಜ್ಯ ನಾಯಕರಿಗೆ ಸೂಚಿಸಿದ್ದರು.


ಅದರಂತೆ ನಿನ್ನೆ ದೆಹಲಿಗೆ ಬರುವಂತೆ ರಾಜ್ಯದ ಮೂವರು ನಾಯಕರಿಗೆ ಹೈಕಮಾಂಡ್ ಕರೆ ಮಾಡಿತ್ತು. ಹೈಕಮಾಂಡ್‌ನ ಬುಲಾವ್ ಮೇರೆಗೆ ಇಂದು ಬೆಳಗ್ಗೆ ಈ ಮೂವರು ಇಂದು ಬೆಳಗ್ಗೆ ದೆಹಲಿಗೆ ಬಂದಿಳಿದರು.


ಸಂಸತ್ ಅಧೀವೇಶನ ನಡೆಯುತ್ತಿರುವ ಕಾರಣ ಸಂಜೆಯ ಬಳಿಕವೇ ಸಚಿವರ ಪಟ್ಟಿ ತಯಾರಿಕೆ ಚರ್ಚೆಯ ಸಭೆ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಬಹುತೇಕ ಇಂದು ಸಚಿವರ ಪಟ್ಟಿ ಅಂತಿಮವಾಗಲಿದೆ ಶುಕ್ರವಾರ ಇಲ್ಲವೆ ಶನಿವಾರ ನೂತನ ಸಚಿವರ ಪದಗ್ರಹಣ ನಡೆಯಲಿದೆ.

ಸಚಿವಕಾಂಕ್ಷಿಗಳು ದೆಹಲಿಯಲ್ಲಿ ಮೊಕ್ಕಾಂ


ಶತಾಯ ಗತಾಯ ಸಚಿವರ ಸ್ಥಾನ ಪಡೆಯಲೇಬೇಕು ಎಂದು ಕಾಂಗ್ರೆಸ್‌ನ ೩೦ ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ದೆಹಲಿಗೆ ಬರುವ ಮುನ್ನ ನಿನ್ನೆ ಮತ್ತು ಮೊನ್ನೆ ಸುಮಾರು ೨೫ ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಆಗಮಿಸಿದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ.


ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವವನ್ನು ಬಳಸಿಕೊಂಡು ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕರು ಹರಸಾಹಸ ನಡೆಸಿದ್ದಾರೆ.


ದೆಹಲಿಯಲ್ಲಿ ಈಗಾಗಲೇ ಶಾಸಕರಾದ ಆರ್.ವಿ. ದೇಶಪಾಂಡೆ, ಆರ್.ಬಿ. ತಿಮ್ಮಾಪುರ, ಬಸವರಾಜ ರಾಯರೆಡ್ಡಿ, ಹರ್ಷದ್ ರಿಜ್ವಾನ್, ಡಾ. ಅಜಯ್‌ಸಿಂಗ್, ಗೋಪಾಲಕೃಷ್ಣ ಬೇಳೂರು, ಅಶೋಕ ಪಟ್ಟಣ, ಆರ್.ಎಸ್. ಪಾಟೀಲ್, ಎನ್.ಎ. ಹ್ಯಾರೀಸ್, ಟಿ.ಬಿ. ಜಯಚಂದ್ರ, ಡಾ.ಹೆಚ್.ಡಿ. ರಂಗನಾಥ್, ಚಲುವರಾಯಸ್ವಾಮಿ, ಶಿವಾನಂದ ಪಾಟೀಲ್, ನರೇಂದ್ರಸ್ವಾಮಿ ಅಬ್ಬಯ್ಯ ಪ್ರಸಾದ್, ಅಲ್ಲಂಪ್ರಭು ಪಾಟೀಲ್, ವಿಜಯಾನಂದ ಕಾಶಪ್ಪನವರ್, ಎಂ.ವೈ. ಪಾಟೀಲ್, ಸೇರಿದಂತೆ ಹಲವು ಶಾಸಕರು ದೆಹಲಿಯಲ್ಲಿ ಇದ್ದು, ಸಚಿವ ಪಟ್ಟಕ್ಕಾಗಿ ಪ್ರಯತ್ನ ನಡೆಸಿದ್ದಾರೆ.