Home ಜಿಲ್ಲೆ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ನವಲಗುಂದ,ಅ೧೪: ಇಂದಿನ ಒತ್ತಡದ ಜೀವನಶೈಲಿ, ಶೈಕ್ಷಣಿಕ ಒತ್ತಡ, ಕುಟುಂಬದ ಸಮಸ್ಯೆಗಳು ಹಾಗೂ ಸಾಮಾಜಿಕ ಪರಿಸ್ಥಿತಿಗಳು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮಾನಸಿಕ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡದೆ, ಅವುಗಳನ್ನು ಅರ್ಥಮಾಡಿಕೊಂಡು ಸೂಕ್ತ ಸಮಯದಲ್ಲಿ ತಜ್ಞರ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು ಎಂದು ಧಾರವಾಡ ಮನೋವೈದ್ಯಕಿಯ ಸಾಮಾಜಿಕ ತಜ್ಞರಾದ ಅಕ್ಷತಾ ಎಂ ಎನ್ ತಿಳಿಸಿದರು.

ಮಂಗಳವಾರ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ಯುವ ರೆಡ್ ಕ್ರಾಸ, ಮಹಿಳಾ ಸಬಲೀಕರಣ ಘಟಕ,ಆಯ್ ಕ್ಯೂ ಎ ಸಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿ ಧಾರವಾಡ ಇವುಗಳ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ “ಮಾನಸಿಕ ಆರೋಗ್ಯ ಮತ್ತು ಮಾನಸಿಕ ಅಸ್ವಸ್ಥತೆಯ ಸಮಸ್ಯೆಗಳು” ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ. ಬಿ. ಬಾಗಡಿ ಅವರು ಮಾತನಾಡಿ, ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪರೀಕ್ಷೆ, ಸ್ಪರ್ಧೆ ಹಾಗೂ ಭವಿಷ್ಯದ ಕುರಿತು ಉಂಟಾಗುವ ಒತ್ತಡವನ್ನು ಸಮರ್ಥವಾಗಿ ಎದುರಿಸಲು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರನ್ನು ತಾತ್ಸಾರದಿಂದ ಕಾಣದೆ, ಅವರಿಗೆ ಪ್ರೀತಿ, ಸಹಾನುಭೂತಿ ಮತ್ತು ಬೆಂಬಲ ನೀಡಬೇಕು. ಮಾನಸಿಕ ಆರೋಗ್ಯದ ಕುರಿತು ಸಮಾಜದಲ್ಲಿರುವ ತಪುö್ಪ ಕಲ್ಪನೆಗಳನ್ನು ದೂರಮಾಡಿ, ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಮಹತ್ವ, ಮಾನಸಿಕ ಅಸ್ವಸ್ಥತೆಯ ಸಮಸ್ಯೆಗಳು ಹಾಗೂ ಅವುಗಳನ್ನು ಎದುರಿಸುವ ವಿಧಾನಗಳ ಕುರಿತು ಅರಿವು ಮೂಡಿಸಲಾಯಿತು.

ದಾವಲಸಾಬ ಗದುಗಿನ ನಿರೂಪಣೆ, ಸವಿತಾ ಚಿಕ್ಕಣ್ಣವರ ಪ್ರಸ್ತಾವಿಕ, ಶ್ರೀಧರ ಲೋಣಕರ್ ವಂದಿಸಿದರು. ಆಯ್ ಕ್ಯೂ ಎ ಸಿ ಸಹ ಸಂಚಾಲಕ ಪ್ರಸನ್ನ ಪಂಢರಿ, ಆರೋಗ್ಯ ಇಲಾಖೆಯ ಮಂಗಳೇಕರ, ನಾಗರತ್ನ ಕುರಡೇಕರ್ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.