
ತುಮಕೂರು, ಆ. ೮- ಉಪ ಮುಖ್ಯಮಂತ್ರಿಡಾ.ಜಿ. ಪರಮೇಶ್ವರ್ ಅವರ ೭೫ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ನಗರದ ಹೊರವಲಯದ ಮೈದಾಳದ ಶಿವ ಶೈಕ್ಷಣಿಕ ಆಶ್ರಮದ ಮಕ್ಕಳೊಂದಿಗೆ ಆಚರಿಸಿದರು. ಆಶ್ರಮದ ಮಕ್ಕಳಿಗೆ ಸಿಹಿ, ಉಪಾಹಾರ ಬಡಿಸಿದರು. ಪಠ್ಯ ಪರಿಕರ ವಿತರಿಸಿ ತಮ್ಮ ನಾಯಕನ ಹುಟ್ಟು ಹಬ್ಬವನ್ನು ಸ್ಮರಣೀಯವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್‌ಕುಮಾರ್, ಡಾ.ಪರಮೇಶ್ವರ್ ಅವರು ಸಜ್ಜನ ಜನನಾಯಕರು. ಆರೋಗ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಅವರು ಸ್ವತ: ಕ್ರೀಡಾಪಟುವಾಗಿ ಕ್ರೀಡೆಯ ಉತ್ತೇಜನಕ್ಕೆ ಮಹತ್ವ ನೀಡಿದ್ದಾರೆ. ತುಮಕೂರು ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ತುಮಕೂರಿಗೆ ಮೆಟ್ರೋ ಸಂಪರ್ಕಒದಗಿಸಬೇಕೆಂದು ಹೆಚ್ಚು ಪ್ರಯತ್ನದಲ್ಲಿದ್ದಾರೆ. ಮೆಟ್ರೋ ಬಂದರೆ ತುಮಕೂರು, ಬೆಂಗಳೂರು ಮಾತ್ರವಲ್ಲ ಅದರ ನಡುವಿನ ಎಲ್ಲಾ ಹಳ್ಳಿಗಳೂ ಅಭಿವೃದ್ಧಿಯಾಗುತ್ತವೆ ಎಂದು ಹೇಳಿದರು.
ಚೆಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಟಿ,ಎನ್. ಮಧುಕರ್ ಮಾತನಾಡಿ, ಡಾ. ಪರಮೇಶ್ವರ್ ಅವರು ದೇಶದಲೇ ಅವರೂಪದ ಸಜ್ಜನಿಕೆಯ ಸಹನಾಶೀಲ ನಾಯಕರು, ಗೃಹ ಖಾತೆ ಮಂತ್ರಿಯಾಗಿದ್ದಾಗಲೂ ಇಲಾಖೆಯ ಒತ್ತಡವನ್ನು ತಾಳ್ಮೆ, ಸಹನೆಯಿಂದ ನಿಭಾಯಿಸಿದರು. ಆದರ್ಶ ರಾಜಕೀಯ ನಾಯಕರು ಹೇಗಿರಬೇಕು ಎಂಬುದಕ್ಕೆ ಡಾ.ಪರಮೇಶ್ವರ್ ಅವರು ಉತ್ತಮ ಉದಾಹರಣೆ. ಇವರ ರಾಜಕೀಯ ಬದುಕು ಯುವ ರಾಜಕಾರಣಿಗಳಿಗೆ ಪ್ರೇರಣೆಯಾಗಿದೆ ಎಂದರು.
ಹಿರಿಯ ಕ್ರೀಡಾಪಟುಟಿ.ಕೆ.ಆನಂದ್ ಮಾತನಾಡಿ, ರಾಜಕಾರಣದ ಒತ್ತಡದಲ್ಲೂ ಪರಮೇಶ್ವರ್ ಅವರ ಕ್ರೀಡಾಸಕ್ತಿ ಕಡಿಮೆಯಾಗಿಲ್ಲ. ಕ್ರೀಡಾ ಕ್ಷೇತ್ರದಲ್ಲಿ ತಮಗಿರುವ ಆಸಕ್ತಿ ಪರಿಣಾಮ ಅವರು ತುಮಕೂರಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ನೆರವಾಗಿದ್ದಾರೆ. ತಮ್ಮ ನೇತೃತ್ವದಲ್ಲಿ ರಾಜ್ಯ, ರಾಷ್ಟ್ರೀಯ ಕ್ರೀಡಾ ಕೂಟಗಳನ್ನು ಆಯೋಜಿಸಿ ತುಮಕೂರಿನ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಮಕೂರು ಹೆಸರಾಗಲು ಕಾರಣರಾಗಿದ್ದಾರೆ. ತುಮಕೂರಿನ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಇಂತಹ ನಾಯಕರ ಕೊಡುಗೆಯನ್ನು ಶ್ಲಾಘಿಸಬೇಕು ಎಂದು ತಿಳಿಸಿದರು.
ಗೃಹ ಮಂತ್ರಿಗಳ ವಿಶೇಷ ಅಧಿಕಾರಿ ಡಾ.ಸಿ.ನಾಗಣ್ಣ ಮಾತನಾಡಿ, ಡಾ.ಪರಮೇಶ್ವರ್ ಅವರು ಆದರ್ಶ ತತ್ವಗಳನ್ನು ಅಳವಡಿಸಿಕೊಂಡಿರುವ ಆದರ್ಶ ನಾಯಕ. ಅವರು ಯಾವತ್ತೂ ಅಧಿಕಾರವನ್ನು ಹುಡುಕಿಕೊಂಡು ಹೋದವರಲ್ಲ, ಅನುಭವ, ಅರ್ಹತೆ, ಜ್ಞಾನ, ಸಾಮರ್ಥ್ಯದಿಂದ ಎಲ್ಲವೂ ಸಿಕ್ಕಿವೆ. ವಿಧಾನಸೌಧದಲ್ಲಿರುವ ಹುದ್ದೆಗಳನ್ನು ಮೀರಿದ ಹುದ್ದೆ ಪಡೆಯುವ ಅರ್ಹತೆ ಅವರಿಗಿದೆ. ಅವರಿಗೆ ಅಧಿಕಾರಕ್ಕಿಂತ ಜನಪರ ಕೆಲಸಗಳೇ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವ ಶೈಕ್ಷಣಿಕ ಆಶ್ರಮದ ಲೇಪಾಕ್ಷಯ್ಯ, ಮುಖಂಡರಾದ ಮಧುಗೋಲ್ಡ್, ಅನು ಶಾಂತರಾಜು, ನಾರಾಯಣ್, ಶ್ರೀನಿವಾಸ್, ಮಹೇಶ್, ಸೈಯದ್, ಸಿಮೆಂಟ್ ರವಿ, ನಟರಾಜಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


































