Home ಜಿಲ್ಲೆ ಕಲಬುರಗಿ ವಿದ್ಯಾರ್ಥಿಗಳ ಅಧ್ಯಯನ ದೇಶಕ್ಕೆ ಸಹಾಯವಾಗಬೇಕು:ಡಾ. ಶರಣಪ್ಪ ಎಸ್. ಡಿ.

ವಿದ್ಯಾರ್ಥಿಗಳ ಅಧ್ಯಯನ ದೇಶಕ್ಕೆ ಸಹಾಯವಾಗಬೇಕು:ಡಾ. ಶರಣಪ್ಪ ಎಸ್. ಡಿ.

ಕಲಬುರಗಿ:ಮೇ.16: ವಿದ್ಯಾರ್ಥಿಗಳೇ ನೀವು ನಿಮ್ಮ ವೈಯಕ್ತಿಕ ಉನ್ನತಿಗಾಗಿ ಅಧ್ಯಯನ ಮಾಡಬೇಡಿ, ನಿಮ್ಮ ಅಧ್ಯಯನ ನಿಮ್ಮ ಕುಟುಂಬಕ್ಕಾಗಿ ಅಥವಾ ಸಮಾಜಕ್ಕಾಗಿ ಸೀಮಿತವಾಗಿರಬಾರದು, ನಿಮ್ಮ ಅಧ್ಯಯನವು ನಮ್ಮ ದೇಶಕ್ಕೆ ಸಹಾಯಕವಾಗಬೇಕು ಎಂಬುದು ನನ್ನ ಪ್ರಾಮಾಣಿಕ ವಿನಂತಿ ಎಂದು ಕಲಬುರಗಿ ನಗರದ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್. ಡಿ. ವಿದ್ಯಾರ್ಥಿಗಳಿಗೆ ಕರೆನೀಡಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರದಂದು ಎರಡು ದಿನಗಳ ಜ್ಞಾನೋತ್ಸವ-2026ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ಉತ್ಸವವು ನಿಮ್ಮನ್ನು ಒಳ್ಳೆಯ ವಿದ್ಯಾರ್ಥಿಗಳನ್ನಾಗಿ ಬೆಳೆಯಲು ಪ್ರೇರೇಪಿಸುತ್ತದೆ. ಶರಣಬಸವ ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡ ಜ್ಞಾನೋತ್ಸವ-2026 ಸಾಂಸ್ಕøತಿಕ ಉತ್ಸವವು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದ್ದು, ಸಂತೋಷ, ಸ್ನೇಹ ಮತ್ತು ಒಗ್ಗಟ್ಟನ್ನು ಹೆಚ್ಚಿಸುವಂತಹ ಈ ಕಾರ್ಯಕ್ರಮವು ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯ ಪ್ರತೀಕವಾಗಿದೆ ಎಂದರು.
ಕಲೆ, ವಿಜ್ಞಾನ, ವಾಣಿಜ್ಯದಂತಹ ಯಾವುದೇ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಗಳನ್ನು ನಿಮ್ಮದಾಗಿಸಿಕೊಳ್ಳಲು ನೀವು ಅಸಾಧಾರಣ ದೃಷ್ಟಿಯನ್ನು ಹೊಂದಿರಬೇಕು. ವಿದ್ಯಾರ್ಥಿಗಳು ನಿಮ್ಮ ಸಾಮಥ್ರ್ಯವನ್ನು ಅಧ್ಯಯನದಲ್ಲಿ ತೋರಿಸಬೇಕು. ಯಾವಾಗಲೂ ಕನಸುಗಳನ್ನು ನನಸಾಗಿಸಲು ಪ್ರಯತ್ನಪಡಬೇಕು. ಇಲ್ಲಿ ನಾವೀನ್ಯತೆ ಹಾಗೂ ಮಾರ್ಕೆಟಿಂಗ್ ಬಗ್ಗೆ ಅನೇಕ ಮಳಿಗೆಗಳನ್ನು ಇರಿಸಲಾಗಿದೆ. ಇದರಿಂದ ಅನೇಕ ವಿಷಯಗಳು ಕಲಿಯಲು ಸಾಧ್ಯವಾಗುತ್ತದೆ. ಯಾವಾಗಲೂ ವಿಶಾಲವಾಗಿ ಯೋಚಿಸಿ ಎಂದು ಪೋಲಿಸ್ ಆಯುಕ್ತರು ತಿಳಿಸಿದರು.
ನಾನು ಮತ್ತು ನನ್ನ ಕುಟುಂಬ ಎಂದಷ್ಟೇ ಹೇಳಬೇಡಿ, ಅದರಿಂದ ಹೊರಬನ್ನಿ, ನಾನು ನಿಮ್ಮನ್ನು ಜಾಗತಿಕ ನಾಯಕರಾಗಿ, ಜಾಗತಿಕ ನಾವೀನ್ಯಕಾರರಾಗಿ, ಸಂಶೋಧಕರಾಗಿ, ಶಿಕ್ಷಕರಾಗಿ, ಇಂಜಿನಿಯರ್‍ಗಳಾಗಿ ಅಥವಾ ವೈದ್ಯರನ್ನಾಗಿ ನೋಡಲು ಬಯಸುತ್ತೇನೆ ಎಂದರು. ಸಮಯವು ತುಂಬಾ ಅಮೂಲ್ಯವಾಗಿದೆ ಅದನ್ನು ವಿನಾಕಾರಣ ವ್ಯರ್ಥ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಶರಣಪ್ಪ ಎಸ್. ಡಿ. ಕಿವಿಮಾತನ್ನು ಹೇಳಿದರು.
ಆಯುಕ್ತರು ಮಾತನಾಡುತ್ತಾ, ದಯವಿಟ್ಟು ಸಂಚಾರಿ ನಿಯಮಗಳನ್ನು ಎಲ್ಲರೂ ಅನುಸರಿಸಿ, ಯಾವಾಗಲೂ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್‍ಗಳನ್ನು ತಪ್ಪದೇ ಹಾಕಿಕೊಳ್ಳಿ ಎಂದು ಉಪಸ್ಥಿತರಿದ್ದ ಎಲ್ಲಾ ಪ್ರೇಕ್ಷಕರಿಗೆ ವಿನಂತಿಸಿದರು.
ಶರಣಬಸವ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಮಾಗಮ, ಸಡಗರ, ಸಂಭ್ರಮ ಮನೆಮಾಡಿತ್ತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಝಗಮಗಿಸುವ ಕಾರ್ಯಕ್ರಮದಲ್ಲಿ ಮಿಂದು ಪುಳಕಿತರಾಗಿದ್ದರು. ಎಲ್ಲೆಂದರಲ್ಲಿ ಉತ್ಸವದ ಬಗ್ಗೆ ಎಲ್ಲರಲ್ಲಿ ಉತ್ಸಾಹವಿತ್ತು.
ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು ಜ್ಞಾನೋತ್ಸವ-2026 ಟೆಕ್ನೊ ಕಲ್ಚ್‍ರಲ್ ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿಯವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಅನಿಲಕುಮಾರ ಬಿಡವೆ, ನಿರ್ದೇಶಕ ಪ್ರೊ. ವಿ. ಡಿ. ಮೈತ್ರಿ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ಡೀನ್ ಡಾ. ಶಿವಕುಮಾರ ಜವಳಿಗಿ, ಹಣಕಾಸು ಅಧಿಕಾರಿ ಡಾ. ಕಿರಣ ಮಾಕಾ ವೇದಿಕೆ ಮೇಲಿದ್ದರು. ವಿವಿಯ ಎಲ್ಲಾ ವಿಭಾಗಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜ್ಞಾನೋತ್ಸವ-2026 ಟೆಕ್ನೊ ಕಲ್ಚ್‍ರಲ್ ಫೆಸ್ಟ್ ಕಾರ್ಯಕ್ರಮದಲ್ಲಿ ಎಲ್ಲಾ ಅತಿಥಿ ಗಣ್ಯರನ್ನು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಲಕ್ಷ್ಮೀ ಪಾಟೀಲ ಮಾಕಾ ಸ್ವಾಗತಿಸಿದರು. ಪ್ರೊ. ಶೃತಿ ಹಾಗೂ ಪ್ರೊ. ಚೇತನಾ ನಿರೂಪಿಸಿದರು.
ಈ ಜ್ಞಾನೋತ್ಸವ-2026 ಟೆಕ್ನೊ ಕಲ್ಚ್‍ರಲ್ ಫೆಸ್ಟ್ ಕಾರ್ಯಕ್ರಮದಲ್ಲಿ ವಿವಿಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಅನೇಕ ಮಳಿಗೆಗಳನ್ನು ಸ್ಥಾಪಿಸಿದ್ದರು. ಈ ಮಳಿಗೆಗಳನ್ನು ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು.