Home ಜಿಲ್ಲೆ ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳುಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸಲು ಸಿದ್ಧರಾಗಿರಿ:ಅಪರ ಜಿಲ್ಲಾಧಿಕಾರಿ ಸುರೇಖಾ

ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳುಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸಲು ಸಿದ್ಧರಾಗಿರಿ:ಅಪರ ಜಿಲ್ಲಾಧಿಕಾರಿ ಸುರೇಖಾ

ಬೀದರ, ಸೆ 18 : ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು ಸತತ ಅಧ್ಯಯನ ಮಾಡುವುದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸಲು ಸಿದ್ಧರಾಗಿರಿ ಎಂದು ಅಪರ ಜಿಲ್ಲಾಧಿಕಾರಿ ಸುರೇಖಾ ಅವರು ಹೇಳಿದರು.
ಗುರುವಾರ ಜಿಲ್ಲಾಡಳಿತ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಲ್ಲಿ ಶ್ರೀ ಎಎಸ್‍ಆರ್ ಸಭಾಂಗಣದಲ್ಲಿ ಆಯೋಜಿಸಿದ ಕಲ್ಯಾಣ ಕರ್ನಾಟಕದ ಉತ್ಸವ ಪ್ರಯುಕ್ತ ನಡೆದ ರಾಷ್ಟ್ರೀಯ ಭಾವೈಕ್ಯತೆ ಬಹುಭಾಷಾ ಕವಿಗೋಷ್ಠಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಹಣೆಪಟ್ಟಿ ಅಳಿಸಲು ನಾವೆಲ್ಲರೂ ಶ್ರಮಪಡಬೇಕು. ಶರಣ, ಪರಂಪರೆಯ ಪುಣ್ಯ ಭೂಮಿ ಇದಾಗಿದೆ. ಕಾಯಕವೇ ಕೈಲಾಸ ಸಾರಿದ ಅಣ್ಣ ಬಸವಣ್ಣನ ಕನಸು ನನಸಾಗಬೇಕಾದರೆ ಈ ಪ್ರದೇಶದ ಎಲ್ಲಾರೂ ಪ್ರತಿಯೊಂದು ಕ್ಷೇತ್ರದಲ್ಲಿ ಶ್ರಮಿಸಬೇಕು. ಆಗ ಹಿಂದುಳಿದ ಹಣೆಪಟ್ಟಿ ಅಳಿಸಲು ಸಾಧ್ಯ ಎಂದರು.
ಪೋಲಿಸ್ ಅಧಿಕಾರಿಯಾಗಿದ್ದ ನಾನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಇಂದು ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ದೊರೆತಿದೆ. ನಮ್ಮೆಲ್ಲರ ಗುರಿಗಳು ವಿಶಾಲವಾಗಿರಬೇಕು. ಆಧುನಿಕ ಜಗತ್ತಿನ ಜ್ಞಾನ ಸಂಪಾದನೆ ಮಾಡುವುದರ ಮೂಲಕ ಹೆಚ್ಚೆಚ್ಚು ಅಧ್ಯಯನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳು ಪಡೆದು ಉನ್ನತ ಹುದ್ದೆಗಳು ಪಡೆದು ಜನಸೇವೆ ಮಾಡುವುದರ ಮುಖಾಂತರ ತಮ್ಮ ತಮ್ಮ ಬದುಕು ಕಟ್ಟಿಕೊಳ್ಳಬಹುದೆಂದು ಅಭಿಪ್ರಾಯ ಪಟ್ಟರು.
ರಾಜ್ಯಸಭೆ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ದಿ. ಧರ್ಮಸಿಂಗ್, ಲೋಕನಾಯಕ ಡಾ. ಭೀಮಣ್ಣಾ ಖಂಡ್ರೆ, ಆರ್. ವಿ. ಬಿಡಪ್, ವೈಜಿನಾಥ ಪಾಟೀಲ ಮುಂತಾದವರು ಹಾಗೂ ಹೈದ್ರಾಬಾದ ಕರ್ನಾಟಕ ಹೋರಾಟದ ಶ್ರಮದಿಂದ ಕಲಂ 371 (ಜೆ) ಪಡೆದುಕೊಳ್ಳಲು ಸಾಧ್ಯವಾಯಿತು. ಈ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ದುಡಿದ ಮಹನೀಯರ ಬಗ್ಗೆ ಸ್ಮರಣೆ ಅಗತ್ಯ ಎಂದು ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಿಲ್ ಬೆಲ್ದಾರ ಅವರು ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷರಾದ ಪ್ರೊ. ಡಾ. ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತಿ ವಸ್ತ್ರದ, ಪುಣ್ಯವತಿ ವಿಸಾಜಿ, ವಜ್ರಾ ಪಾಟೀಲ, ಪಾರ್ವತಿ ಸೋನಾರೆ, ಡಾ. ಸಾವಿತ್ರಿ ಹೆಬ್ಬಾಳೆ, ಜಯಶ್ರೀ ಸುಕಾಲೆ, ಪುಷ್ಪ ಕನಕ, ಸುನಿತಾ ದಾಡಗೆ, ಚನ್ನಮ್ಮ ವಲ್ಲೇಪೂರೆ, ಸಾರಿಕಾ ಗಂಗಾ, ಶಾಂತಮ್ಮ ಬಲ್ಲೂರ, ಎಸ್.ಬಿ. ಕುಚಬಾಳ, ದೇವೇಂದ್ರ ಬರಗಾಲೆ, ಡಾ. ಮಂಜು ಮಾಲೇಕರ್, ಮಾರುತಿ ಭೀಮಣ್ಣ, ಸುನಿಲ ಆಡೆ, ಅಮೂಲ್ಯ ಎಸ್, ಚಂದ್ರಶೇಖರ ಸಿಂಧೆ, ಸರಿತಾ ಸಿಂಧೆ, ಸಯೀದ್ ಅಬ್ದುಲ್ ಲತೀಫ್ ಖಲೀಷಾ, ಡಾ. ಮುಸ್ತಾಖೀಮ್ ಬೇಗಂ, ಅಮೀರ ಉದ್ದಿನ್ ಅಮೀರ, ಹಮೀದ ಸಲೀಮ ಹಮೀದ್, ಅಮೀನ್ ನವಾಜ, ಯುಸೂಫ ರಹೀಂ, ಡಾ. ಪಾಟೀಲ್ ಶಶಿಕಾಂತ, ಡಾ. ಅರ್ಷಾ ಜಬೀನ್, ಡಾ. ಕೃಷ್ಣಾವೇಣಿ ಬಿ, ಡಾ. ಅಚಿಜಲಿ ಲುಲ್ಲೇ ಮುಂತಾದ ಕವಿಗಳು ರಾಷ್ಟ್ರೀಯ ಭಾವೈಕ್ಯತೆ ಕುರಿತು ಕವನ ವಾಚನ ಮಾಡಿದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿ ಡಾ. ಸುನಿತಾ ಕೂಡ್ಲಿಕರ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸಾಹಿತ್ಯ ಸಂಘ ಟ್ರಸ್ಟ ಅಧ್ಯಕ್ಷರಾದ ಶಂಕರರಾವ ಹೊನ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ಸಾಹಿತ್ಯ ಸಂಘ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು.