
ಕಲಬುರಗಿ,ಸೆ.19-ಹಾವೇರಿ ಜಿಲ್ಲೆಯ ಚೌಡಯ್ಯದಾನಪುರದಲ್ಲಿರುವ ನಿಜ ಶರಣ ಅಂಬಿಗರ ಚೌಡಯ್ಯನವರ ಗದ್ದುಗೆಯನ್ನು ಕೂಡಲ ಸಂಗಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಕರ್ನಾಟಕ ಕೋಲಿ ಸೈನ್ಯದ ರಾಜ್ಯ ಅಧ್ಯಕ್ಷ ನಿಂಗಪ್ಪ ಆರ್.ದೇವಣಗಾಂವ ಒತ್ತಾಯಿಸಿದ್ದಾರೆ.
ಈಚೆಗೆ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಈ ಸಂಬಂಧ ಮನವಿ ಪತ್ರ ಸಲ್ಲಿಸಿರುವ ಅವರು, ಚೌಡಯ್ಯದಾನಪುರದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು, ಇದು ಕೇವಲ ಗದ್ದುಗೆ ಅಭಿವೃದ್ಧಿಯಲ್ಲ, 12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯನವರ ಕಾಯಕ, ವಚನ, ಸಾಮಾಜಿಕ ಸಮಾನತೆ ಮತ್ತು ಮಾನವೀಯ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ರಾಷ್ಟ್ರೀಯ ಮಟ್ಟದ ಸಾಂಸ್ಕøತಿಕ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಬೇಕು, ಅಂಬಿಗರ ಚೌಡಯ್ಯನವರ ಅಧ್ಯಯನ ಕೇಂದ್ರ, ವಚನ ಮಂಟಪ ಸ್ಥಾಪಿಸಬೇಕು, ತುಂಗಭದ್ರಾ ನದಿ ತಟ ಅಭಿವೃದ್ಧಿ ಪಡಿಸುವುದರ ಜೊತೆಗೆ ಈ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.


























