
ಬೀದರ: ಪ್ರಾಚೀನ ಜ್ಞಾನ ಪರಂಪರೆಯ ಪರಿಚಯ ಹಾಗೂ ಹಸ್ತಪ್ರತಿಗಳ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ, ೨೩ನೇ ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನದ ಎರಡನೇ ದಿನ ಹಸ್ತಪ್ರತಿಗಳ ಪ್ರದರ್ಶನ ಮತ್ತು ಮಾಹಿತಿ ಸಂವಾದ ಕಾರ್ಯಕ್ರಮ ನಡೆಯಿತು.
ಹಂಪಿ ಕನ್ನಡ ವಿಶ್ವವಿದ್ಯಾಲಯ, ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕ.ರಾ.ಶಿ. ಸಂಸ್ಥೆಯ ಕಲ್ಯಾಣ ಕರ್ನಾಟಕ ಸಂಶೋಧನಾ ಕೇಂದ್ರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಲಾದ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಹಸ್ತಪ್ರತಿಗಳ ಪ್ರದರ್ಶನವನ್ನು ವೀಕ್ಷಿಸಿ, ಅವುಗಳಲ್ಲಿನ ಜ್ಞಾನ ಸಂಪತ್ತಿನ ಕುರಿತು ಆಸಕ್ತಿಯಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಹಸ್ತಪ್ರತಿ ವಿಭಾಗದ ಡಾ. ವೀರೇಶ ಬಡಿಗೇರ ಅವರು ವಿದ್ಯಾರ್ಥಿಗಳಿಗೆ ಹಸ್ತಪ್ರತಿಗಳ ಉತ್ಪತ್ತಿ, ರಚನೆ, ಅವುಗಳಲ್ಲಿ ಅಡಕವಾಗಿರುವ ವಿವಿಧ ವಿಷಯಗಳು ಹಾಗೂ ಅವುಗಳನ್ನು ಸಂರಕ್ಷಿಸುವ ವಿಧಾನಗಳ ಕುರಿತು ವಿವರವಾಗಿ ತಿಳಿಸಿಕೊಟ್ಟರು.
ಹಸ್ತಪ್ರತಿಗಳು ನಮ್ಮ ಪೂರ್ವಜರ ಜ್ಞಾನ, ಇತಿಹಾಸ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಅಮೂಲ್ಯ ಆಕರಗಳಾಗಿವೆ. ಇಂತಹ ಹಸ್ತಪ್ರತಿಗಳ ಮಹತ್ವವನ್ನು ಅರಿತು, ಅವುಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವುದು ಅತ್ಯಗತ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಪ್ರದರ್ಶನದ ವೇಳೆ ವಿದ್ಯಾರ್ಥಿಗಳು ಪ್ರಾಚೀನ ಲಿಪಿಗಳು, ಸಾಹಿತ್ಯ ಸಂಪತ್ತು ಹಾಗೂ ಜ್ಞಾನ ಪರಂಪರೆಯನ್ನು ವೀಕ್ಷಿಸಿ ಸಂಭ್ರಮಿಸಿದರು. ಹಸ್ತಪ್ರತಿಗಳ ಕುರಿತು ನಡೆದ ಸಂವಾದವು ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸುವುದರ ಜತೆಗೆ, ಪ್ರಾಚೀನ ಪರಂಪರೆಯ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವಲ್ಲಿ ಅರ್ಥಪೂರ್ಣವಾಯಿತು.
ಈ ಸಂದರ್ಭದಲ್ಲಿ ಕನ್ನಡ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಸೋಮನಾಥ ಬಿರಾದಾರ, ಕನ್ನಡ ವಿಭಾಗದ ಮುಖ್ಯಸ್ಥೆ ಮಹಾನಂದ ಮಡಕಿ, ಡಾ.ಚಂದ್ರಶೇಖ ಕಾಳನ್ನವರ, ಶೇಖರ ಗೊಳಸಂಗಿ, ದತ್ತಾತ್ರೇಯ ವಿಶ್ವಕರ್ಮ, ಸೇರಿದಂತೆ ಹಲವರು ಉಪಸ್ಥಿತರಿದ್ದರು.























