
ಬೆಂಗಳೂರು,ಅ.೧೫: ಸ್ಟಿಂಗ್ ಆಪರೇಷನ್ ವಿಡಿಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಇಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಶಾಸಕರೊಂದಿಗೆ ಧರಣಿ ನಡೆಸಿ ತನಿಖೆಗೆ ೨ ದಿನಗಳ ಗಡುವನ್ನು ನೀಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗೋಷ್ಟಿ ನಡೆಸಿ ಸ್ಟಿಂಗ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಂತರ ತಮ್ಮ ಶಾಸಕರುಗಳೊಂದಿಗೆ ಬೆಂಗಳೂರಿನ ಇನ್ ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಗೆ ದೂರು ನೀಡಿ ಅವರ ಜೊತೆ ಸುಮಾರು ಅರ್ಧಗಂಟೆಗೂ ಚರ್ಚೆ ನಡೆಸಿ ತನಿಖೆಗೆ ಪಟ್ಟು ಹಿಡಿದರು.
ತಕ್ಷಣವೇ ತನಿಖೆಗೆ ಆದೇಶಿಸಿ ಎಂದು ಒತ್ತಾಯಿಸಿ ಧರಣಿಯನ್ನು ಆರಂಭಿಸಿದರು. ನಂತರ ಪೊಲೀಸ್ ಆಯುಕ್ತರು ಅವರ ಮನವೊಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ೨ ದಿನದೊಳಗಾಗಿ ತನಿಖೆ ನಡೆಸುವಂತೆ ಗಡುವು ನೀಡಿ ಧರಣಿ ಕೈ ಬಿಟ್ಟರು
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಿಷನರ್ ಅವರ ಮನವಿ ಮೇರೆಗೆ ಇಂದು ಹೋರಾಟವನ್ನು ಕೈಬಿಟ್ಟಿದ್ದೇವೆ. ಆದರೆ, ಸಂಬಂಧಪಟ್ಟ ಪ್ರಮುಖ ವ್ಯಕ್ತಿಯನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಎರಡು ದಿನಗಳ ಗಡುವು ನೀಡಿದ್ದೇವೆ ಎಂದು ತಿಳಿಸಿದರು
ಸುರ್ಜೇವಾಲ ಅವರ ಜೊತೆ ಇರುವ ವ್ಯಕ್ತಿಯನ್ನು ಬಂಧಿಸಿ, ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಹೇಳುವಂತೆ ಒತ್ತಾಯಿಸಿರುವ ಆರೋಪದ ಕುರಿತು ತನಿಖೆ ನಡೆಸಬೇಕು.ಅಲ್ಲದೆ, ಸುರ್ಜೇವಾಲ ಅವರ ಜೊತೆ ಇರುವ ವ್ಯಕ್ತಿ ಮತ್ತು ರಾಕೇಶ್ ನಡುವಿನ ಸಂಬಂಧವೇನು ಎಂಬುದನ್ನು ಬಹಿರಂಗಪಡಿಸಬೇಕು. ಈ ಎಲ್ಲ ವಿಚಾರಗಳು ಮುಖ್ಯಮಂತ್ರಿಗಳಿಗೆ ತಿಳಿದಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸ್ಟಿಂಗ್ ಮಾಡುತ್ತಿರುವ ವ್ಯಕ್ತಿ ಯಾರೆಂಬುದು ಸರ್ಕಾರಕ್ಕೆ ತಿಳಿದಿದ್ದರೂ ಬಂಧನ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇನ್ನೂ ಎರಡು ದಿನಗಳಲ್ಲಿ ಬಂಧನವಾಗದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ಟಿಂಗ್ ಆಪರೇಷನ್ ವಿಡಿಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಕಮೀಷನರ್ ಅವರನ್ನು ಆಗ್ರಹಿಸಿದ್ದೇನೆ. ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೇರ ಸವಾಲು ಹಾಕಿದರು.
ನಾನು ಕಮೀಷನರ್ ಕಚೇರಿಗೆ ಬಂದಿದ್ದೇನೆ,ಅರೆಸ್ಟ್ ಮಾಡಿ. ತಾಕತ್ತಿದ್ದರೆ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ಎಂದು ಸವಾಲು ಹಾಕಿದ್ದಾರೆ.
ಸ್ಟಿಂಗ್ ಆಪರೇಷನ್ ವಿಚಾರವಾಗಿ ತಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಬಂಧಿಸಿದ ಆಡಿಯೋ ಹಾಗೂ ಪೆನ್ಡ್ರೈವ್ ವಿಚಾರಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ನನ್ನನ್ನು ಪ್ರಕರಣದಲ್ಲಿ ಸಿಲುಕಿಸಬೇಕು ಎಂಬ ಚರ್ಚೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ. ಹಿಂದೆ ಮಹಿಳೆಯೊಬ್ಬರನ್ನು ಬಳಸಿಕೊಂಡು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದಂತೆ, ನನ್ನನ್ನೂ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಿಯೋ ವಿಚಾರವಾಗಿ ಪ್ರಶ್ನೆಗಳನ್ನು ಎತ್ತಿದ ಅವರು, ತನಿಖೆಗೆ ಒಳಪಡಬೇಕಾದ ವ್ಯಕ್ತಿ ಪೊಲೀಸ್ ಠಾಣೆಯಲ್ಲೇ ಆರಾಮವಾಗಿ ಮಾತನಾಡಿಕೊಂಡು ಇರುತ್ತಾರೆ. ನಿನ್ನೆ ಡಿಸಿಪಿ ಕಚೇರಿಯಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು ಎಂಬ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ.
ಸ್ಟಿಂಗ್ ಆಪರೇಷನ್ ವಿಡಿಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಮೊದಲು ತಮ್ಮ ಮೊಬೈಲ್ ಫೋನ್ ಅನ್ನು ತನಿಖೆಗೆ ಒಪ್ಪಿಸಲಿ ಎಂದು ಆಗ್ರಹಿಸಿದ್ದಾರೆ.
ಪ್ರಕರಣದಲ್ಲಿ ಸಂಶಯ ಬಂದರೆ ಕುಮಾರಸ್ವಾಮಿ ಅವರನ್ನೂ ವಿಚಾರಣೆಗೆ ಕರೆಯುತ್ತೇವೆ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ‘ನಾನು ಕಮೀಷನರ್ ಕಚೇರಿಗೆ ಬಂದಿದ್ದೇನೆ ನನ್ನನ್ನು ಮುಟ್ಟಿ ನೋಡಿ’ ಎಂದು ಸವಾಲು ಹಾಕಿದರು.
ಗೃಹ ಇಲಾಖೆ ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ ಎಂದು ಹೇಳಿದ ಅವರು, ತಾಕತ್ತು ಮತ್ತು ಯೋಗ್ಯತೆ ಇದ್ದರೆ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಲಿ. ನಾನು ಹೋರಾಟಕ್ಕೆ ಸಿದ್ಧನಿದ್ದೇನೆ, ಬನ್ನಿ ಅಖಾಡಕ್ಕೆ ಎಂದು ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿಯನ್ನೇ ಸಿಲುಕಿಸಲು ಸಂಚು ರೂಪಿಸುವವರ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಕುಮಾರಸ್ವಾಮಿ, ತಮ್ಮ ಆಕ್ರೋಶಭರಿತ ಮಾತುಗಳಿಂದ ರಾಜ್ಯದ ಜನರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
‘ನನಗೆ ರಕ್ತ ಕುದಿಯುತ್ತಿದೆ. ನಮ್ಮ ರಾಜ್ಯ ಉಳಿಯಬೇಕು. ಕರ್ನಾಟಕವನ್ನು ಇಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


























