Home Uncategorized ನಾಳೆಯಿಂದ ರಾಜ್ಯಾದ್ಯಂತ ಕಲ್ಲು ಕ್ವಾರಿ, ಕ್ರಷರ್ ಎಂ.ಸ್ಯಾಂಡ್ ಬಂದ್

ನಾಳೆಯಿಂದ ರಾಜ್ಯಾದ್ಯಂತ ಕಲ್ಲು ಕ್ವಾರಿ, ಕ್ರಷರ್ ಎಂ.ಸ್ಯಾಂಡ್ ಬಂದ್

ಬೆಂಗಳೂರು, ಸೆ.೧೭: ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಎರಡು ಕಡೆಗಳಲ್ಲಿ ರಾಜಧನ ಸಂಗ್ರಹಿಸುತ್ತಿರುವ ಕ್ರಮವನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ಸೆಪ್ಟೆಂಬರ್ ೧೮ರಿಂದ ರಾಜ್ಯಾದ್ಯಂತ ಕಲ್ಲು ಕ್ವಾರಿ, ಜಲ್ಲಿ ಕ್ರಷರ್ ಹಾಗೂ ಎಂ.ಸ್ಯಾಂಡ್ ಘಟಕಗಳನ್ನು ಬಂದ್ ಮಾಡಿ ಉಗ್ರ ಹೋರಾಟ ನಡೆಸಲು ನಿರ್ಧರಿಸಿದೆ.


ರಾಜ್ಯದಾದ್ಯಂತ ಇರುವ ಕಲ್ಲು ಕ್ವಾರಿಗಳು, ಜಲ್ಲಿ ಕ್ರಷರ್‌ಗಳು ಹಾಗೂ ಎಂ.ಸ್ಯಾಂಡ್ ಘಟಕಗಳನ್ನು ಸ್ಥಗಿತಗೊಳಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಡಿ. ಸಿದ್ಧರಾಜು ತಿಳಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕಡೆ ರಾಜಧನ ವಸೂಲಿ ಮಾಡುವ ಕ್ರಮವನ್ನು ಕೈಬಿಟ್ಟು ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿ, ಅದನ್ನು ರಾಜ್ಯಪತ್ರದಲ್ಲಿ ಪ್ರಕಟಿಸುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದರು.‘ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಾಗಿರುವ ಜಲ್ಲಿ ಮತ್ತು ಎಂ.ಸ್ಯಾಂಡ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು. ಹೊರ ರಾಜ್ಯಗಳಿಂದ ಕಲ್ಲುಗಣಿ ಸಂಪನ್ಮೂಲ ರಾಜ್ಯಕ್ಕೆ ಬರದಂತೆ ತಡೆಯುವ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರಾಜಧನ ಪಾವತಿಯಾಗಿದ್ದರೂ ಮತ್ತೆ ಗಣಿಗುತ್ತಿಗೆದಾರರಿಂದ ರಾಜಧನ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಕಲ್ಲು ಗಣಿಗಾರಿಕೆ ವಲಯದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುವ ಕ್ರಮಕ್ಕೆ ನಮ್ಮ ವಿರೋಧವಿದೆ,” ಎಂದರು.


ಕಾಮಗಾರಿ ನಿರ್ವಹಿಸುವ ಇಲಾಖೆಗಳಲ್ಲಿಯೂ ರಾಜಧನವನ್ನು ಪಾವತಿಸಿಕೊಳ್ಳಲಾಗುತ್ತಿದೆ. ಈವರೆಗೆ ಕಲ್ಲು ಗಣಿಗಾರಿಕೆ ವಲಯದಿಂದ ಸರ್ಕಾರಕ್ಕೆ ಸಂದಾಯವಾಗಿರುವ ಒಟ್ಟು ರಾಜಧನದ ಮೊತ್ತದ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.


ತಲಾತಲಾಂತರಗಳಿಂದ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ಸಣ್ಣ ಹಾಗೂ ಸ್ಥಳೀಯ ಉದ್ಯಮಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ನೀತಿಗಳು ರೂಪುಗೊಳ್ಳುತ್ತಿವೆ ಎಂದು ಅವರು ಆರೋಪಿಸಿದರು.


ಏಕರೂಪ ರಾಜಧನ ಸಂಗ್ರಹ ಸೇರಿದಂತೆ ಒಕ್ಕೂಟದ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟವನ್ನೂ ನಡೆಸಲಾಗುವುದು ಎಂದು ಡಿ. ಸಿದ್ಧರಾಜು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ವಾಗೀಶ್, ಅಬ್ದುಲ್ ಮಜಿದ್, ಮನೋಜ್ ಶೆಟ್ಟರ್, ಪಂಚಮಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಸಿ.ಎಸ್. ಭಾಸ್ಕರ್, ಉಪ ಕಾರ್ಯದರ್ಶಿ ಡಿ.ಆರ್. ಮಹೇಶ್, ಸಂಘಟನಾ ಕಾರ್ಯದರ್ಶಿ ಕೆ.ವಿ. ಚೌಧರಿ, ಕೋಶಾಧಿಕಾರಿ ಉಮಾಶಂಕರಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.