
ಸಿರಾ, ಜೂ. ೧೩- ತಾಲ್ಲೂಕಿನ ನವ್ಯದಿಶ ಸಂಸ್ಥೆಯ ಯುವಚಾವಡಿ ಕಾರ್ಯಕ್ರಮ ವತಿಯಿಂದ ಕಳ್ಳಂಬೆಳ್ಳ ಹೋಬಳಿಯ ೧೦ ಗ್ರಾಮ ಪಂಚಾಯತಿ ವ್ಯಾಪ್ತಿಯ ೨೦ ಯುವಜನ ಸಂಘಗಳ ಸದಸ್ಯರಿಗಾಗಿ ವಾರ್ಷಿಕ ಕ್ರೀಡಾಕೂಟ “ಕ್ರೀಡಾ ಚೇತನ” ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ ಎಲ್ ಕೇದಾರ್ ಮಾತನಾಡಿ, ಹಲವುರು ನಾಗರೀಕ ಸೇವಾ ಪರೀಕ್ಷೆ ಬರೆದು ಸಾರ್ವಜನಿಕ ಸೇವೆ ಮಾಡಬೇಕೆಂದು ಅಧಿಕಾರಿಗಳಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಊರುಗಳಲ್ಲಿ ಯುವಜನ ಸಂಘಗಳನ್ನು ಕಟ್ಟಿಕೊಂಡು ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಬ್ಬ ಯುವಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜತೆಗೆ ಸಾರ್ವಜನಿಕವಾಗಿ ತೊಡಗಿಸಿಕೊಳ್ಳಬೇಕು. ಗ್ರಾಮಗಳ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ದೇಶದ ಅಭಿವೃದ್ಧಿಯಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದರು.
ಯುವ ಚಾವಡಿಯಲ್ಲಿ ಕ್ರೀಡಾ ಚೇತನ ಮಾಡುತ್ತಿರುವುದು ಯುವಜನರ ಆರೋಗ್ಯದ ಜತೆ ಅವರ ನಡುವೆ ಸ್ನೇಹ ಮತ್ತು ಸೌಹಾರ್ದತೆಯನ್ನು ಹೆಚ್ಚಿಸುವ ಬಗ್ಗೆ ಹೆಚ್ಚು ಗಮನಹರಿಸಲು ಸಹಾಯವಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕಿ ಅಶ್ವಿನಿ ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿ, ಗ್ರಾಮೀಣ ಭಾಗದ ಯುವಜನರನ್ನು ಒಗ್ಗೂಡಿಸಿ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಕ್ರೀಡಾ ಚೇತನ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು, ತಂಡ ಚಟುವಟಿಕೆಗಳು ಹಾಗೂ ಮನರಂಜನಾ ಆಟಗಳನ್ನು ಆಡಿಸಲಾಗುತ್ತಿದೆ. ಕ್ರೀಡೆಯ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಜತೆಗೆ ಯುವಜನರಲ್ಲಿ ಸ್ನೇಹ ಸೌಹಾರ್ದತೆ ಮತ್ತು ಸಾಮಾಜಿಕ ಬಾಂಧವ್ಯ ವೃದ್ಧಿಸುವುದು ಕ್ರೀಡಾ ಚೇತನದ ಪ್ರಮುಖ ಉದ್ದೇಶವಾಗಿದೆ ಎಂದರು.
ಈ ಕ್ರೀಡಾ ಚೇತನದಲ್ಲಿ ಕ್ರೀಡೆಗಳ ನಿಯಮಗಳನ್ನು ಕಾರ್ಯಕ್ರಮ ಸಂಯೋಜಕರಾದ ಸಿ.ಎಂ.ಎಸ್. ಗೌಡ ವಿವರಿಸಿ, ಆಟಗಳನ್ನು ಆಡಿಸಿದರು. ಯುವಜನರಿಗೆ ಕ್ರಿಕೇಟ್, ಟ್ರಜರ್ ಅಂಟ್, ಶೆಟಲ್ ಕಾಕ್ ಆಟಗಳನ್ನು ಆಡಿಸಲಾಯಿತು. ಕ್ರೀಡಾ ಚೇತನದಲ್ಲಿ ವಿಶೇಷವಾಗಿ ಆಟದ ತಂಡಗಳಲ್ಲಿ ಯುವಕ ಮತ್ತು ಯುವತಿಯರು ಲಿಂಗಭೇದ ಮರೆತು ಲಿಂಗ ಸಮಾನತೆಯಿಂದ ಆಟಗಳನ್ನು ಆಡಿದರು. ಈ ಮೂರು ಆಟಗಳಲ್ಲಿ ಗೆದ್ದ ಯುವಜನರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಕ್ರೀಡಾ ಚೇತನದಲ್ಲಿ ತೀರ್ಪುಗಾರರಾಗಿ ಭರತ್, ಸತೀಶ್ ಮತ್ತು ತಿಮ್ಮೇಗೌಡರವರು ಉತ್ತಮ ತೀರ್ಪುಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ನವ್ಯದಿಶದ ಸಂಸ್ಥೆಯ ಸಿಇಒ ಅರ್ಚನಾ ನಂಬಿಯಾರ್, ಸೀನಿಯರ್ ಪ್ರೋಗ್ರಾಂ ಮ್ಯಾನೇಜರ್ ಭಾಗ್ಯಲಕ್ಷ್ಮೀ, ಹೆಚ್ ಆರ್ ಪುಷ್ಪ,, ಕಳ್ಳಂಬೆಳ್ಳದ ಪಿಎಂಶ್ರೀ ಶಾಲೆಯ ಮುಖ್ಯೋಪಾಧ್ಯಾಯರಾದ ಅನಿಲ್ ಕುಮಾರ್, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪಾಪರಾಜು, ಕಾರ್ಯಕ್ರಮ ಸಂಯೋಜಕ ಜನಾರ್ಧನ್ ಜೆ.ಎಸ್., ಮಂಜುನಾಥ್ ಅಮಲಗೊಂದಿ, ಸಂಸ್ಥೆಯ ಯೂಥ್ ಮೆಂಟರ್ ಭವ್ಯ ಎನ್, ಅಂಬಿಕಾ ಎನ್, ಪೂಜಾ ಸಿ.ಎಂ, ಯಮುನಾ, ರಾಧಾ, ಕಿರಣ್‌ಕುಮಾರ್, ಸಲ್ಮಾ, ತ್ರಿವೇಣಿ ಮತ್ತತರರು ಭಾಗವಹಿಸಿದ್ದರು.


































