
ಹಾರೋಹಳ್ಳಿ,ಆ.೫ : ಪಟ್ಟಣದಲ್ಲಿ ಇರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಶ್ರೀ ಚಾಮುಂಡೇಶ್ವರಿ ವರ್ಧಂತಿಯ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದೇವಾಲಯದ ಪ್ರಧಾನ ಅರ್ಚಕ ಕಲ್ಯಾಣ್ ಕುಮಾರ್ ನೇತೃತ್ವದಲ್ಲಿ ಅಮ್ಮನವರಿಗೆ ಪಂಚಾಮೃತಾಭಿಷೇಕವನ್ನು ಮಾಡಿ ಫಲ ಪುಷ್ಪಗಳಿಂದ ಅಲಂಕಾರವನ್ನು ಮಾಡಲಾಗಿತ್ತು.ಬೆಳಗಿನ ಜಾವ ೬ ಗಂಟೆಯಿಂದ ಭಕ್ತಾದಿಗಳಿಗೆ ಅಮ್ಮನವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಬೆಳಿಗ್ಗೆ ೫ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಸರತಿಯ ಸಾಲಿನಲ್ಲಿ ಅಮ್ಮನವರ ದರ್ಶನ ಪಡೆದರು. ಹಾರೋಹಳ್ಳಿ ಸುತ್ತಮುತ್ತಲಿನ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಬೆಳಿಗ್ಗೆಯಿಂದಲೇ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಹಾಗೆಯೇ ಮಧ್ಯಾಹ್ನದ ವೇಳೆಗೆ ಅವರೆಕಾಳು ಮುದ್ದೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಎಲ್ಲಾ ರಾಜಕೀಯ ಮುಖಂಡರು ಈ ಪ್ರಸಾದ ವಿತರಣಾ ಕಾರ್ಯಕ್ರಮದಲ್ಲಿ ತಮ್ಮನ್ನು ಜೋಡಿಸಿಕೊಂಡಿದ್ದರು.
ಸಂಜೆ ರಥೋತ್ಸವವನ್ನು ಏರ್ಪಡಿದ್ದು ಮಳೆಯ ಕಾರಣ ದೇವಾಲಯದ ಆವರಣದಲ್ಲಿ ಅಮ್ಮನವರ ಉತ್ಸವ ಮೂರ್ತಿಯ ಪ್ರಾಕಾರೋತ್ಸವ ನಡೆಯಿತು ಎಂದು ದೇವಾಲಯದ ಪ್ರಧಾನ ಅರ್ಚಕರಾದ ಕಲ್ಯಾಣ್ ಕುಮಾರ್ ತಿಳಿಸಿದರು.

































