
ಬೆಂಗಳೂರು.ಆ೨೫: ಬೆಂಗಳೂರು ಮೂಲದ ‘ಪ್ರಯೋಗ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್’ ಸಂಸ್ಥೆಯು ಆಯೋಜಿಸಿದ್ದ ಪ್ರಮುಖ ವಿದ್ಯಾರ್ಥಿ ಸಂಶೋಧನಾ ಕಾರ್ಯಕ್ರಮ ‘ಅನ್ವೇಷಣ ೨೦೨೬’ ಯಶಸ್ವಿಯಾಗಿ ನೆರವೇರಿತು.
ನಗರದ ಎನ್ಎಂಕೆಆರ್ವಿ ಕಾಲೇಜಿನಲ್ಲಿ ಭಾನುವಾರ ನಡೆದ ಅಂತಿಮ ಸುತ್ತಿನ ಕಾರ್ಯಕ್ರಮದಲ್ಲಿ, ಅಂತಿಮ ಆಯ್ಕೆಯಲ್ಲಿದ್ದ ಅತ್ಯುತ್ತಮ ನಾಲ್ಕು ಸಂಶೋಧನಾ ಯೋಜನೆಗಳನ್ನು ಪ್ರದರ್ಶಿಸಲಾಯಿತು.
ಪ್ರಥಮ ಸ್ಥಾನ: ಮಾಲಿಕ್ಯೂಲರ್ ಡಾಕಿಂಗ್, ಎನ್ಹ್ಯಾನ್ಸ್ಡ್ ಸ್ಯಾಂಪ್ಲಿಂಗ್ ಮಾಲಿಕ್ಯೂಲರ್ ಡೈನಾಮಿಕ್ಸ್ ಮತ್ತು ಕೆಲವು ಜೈವಿಕ ಸಕ್ರಿಯ ಸಂಯುಕ್ತಗಳ ಔಷಧೀಯ ಗುಣಗಳನ್ನು ಸಂಯೋಜಿಸುವ ಮಲ್ಟಿಸ್ಕೇಲ್ ಕಂಪ್ಯೂಟೇಶನಲ್ ವಿಧಾನ. ದ್ವಿತೀಯ ಸ್ಥಾನ: ಭಾರತದಲ್ಲಿ ಮಾರಾಟವಾಗುವ ಪ್ರಮುಖ ಟೀ ಬ್ರಾಂಡ್ಗಳಲ್ಲಿರುವ ಕೀಟನಾಶಕ ಅವಶೇಷಗಳು, ಹಾನಿಕಾರಕ ರಾಸಾಯನಿಕಗಳು ಮತ್ತು ಲೋಹದ ಕಲ್ಮಶಗಳ ಗುಣಾತ್ಮಕ ವಿಶ್ಲೇಷಣೆ.
ತೃತೀಯ ಸ್ಥಾನ: ಥರ್ಮೋಫಿಲಿಕ್ ಸೂಕ್ಷ್ಮಜೀವಿ-ಎಂಜೈಮ್ ವ್ಯವಸ್ಥೆಯನ್ನು ಬಳಸಿ ಅಡುಗೆಮನೆಯ ತ್ಯಾಜ್ಯವನ್ನು ತ್ವರಿತವಾಗಿ ಗೊಬ್ಬರ ಮಾದರಿಯ ಮಣ್ಣಾಗಿ ಪರಿವರ್ತಿಸುವ ಜೈವಿಕ ಪ್ರಕ್ರಿಯೆ.ನಾಲ್ಕನೇ ಸ್ಥಾನ: ನೈಸರ್ಗಿಕ ಲ್ಯಾಟೆಕ್ಸ್ನ ಹಸಿರು ಹೆಪ್ಪುಗಟ್ಟಿಸುವಿಕೆ ಮತ್ತು ತ್ಯಾಜ್ಯ ಸಸ್ಯ ನಾರುಗಳನ್ನು ಬಳಸಿ ಸುಸ್ಥಿರ ಸಂಯೋಜಿತ ವಸ್ತುಗಳ ಅಭಿವೃದ್ಧಿಗೆ ದೊರಕಿದೆ.
ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಮರ್ಸಿಡಿಸ್-ಬೆಂಜ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮನುಸಾಲೆ, ಡೆಲಾಯ್ಟ್ ದಕ್ಷಿಣ ಏಷ್ಯಾದ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ. ರೇನಾಟಾ ಜೊವಾನೊವಿಚ್ ಹಾಗೂ ಎಸ್ಬಿಐ ಫೌಂಡೇಶನ್ ಅಧ್ಯಕ್ಷ ಪ್ರತ್ಯುಷ್ ಮೆಹ್ರೋತ್ರಾ ಸೇರಿದಂತೆ ಹಲವು ರಂಗಗಳ ಗಣ್ಯರು ಉಪಸ್ಥಿತರಿದ್ದು, ಯುವ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಮರ್ಸಿಡಿಸ್-ಬೆಂಜ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಇಂಡಿಯಾ ( ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮನುಸಾಲೆ, “ನೈಜ ಜಗತ್ತಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಸ್ವಾತಂತ್ರ್ಯ ನೀಡಿದರೆ ಯುವಮನಸ್ಸುಗಳು ಅಪಾರ ಸಾಧನೆ ಮಾಡಬಲ್ಲವು ಎಂಬುದಕ್ಕೆ ’ಅನ್ವೇಷಣ’ ಶ್ರೇಷ್ಠ ನಿದರ್ಶನ. ವಿದ್ಯಾರ್ಥಿಗಳ ಸಂಶೋಧನೆಯ ಉನ್ನತ ಗುಣಮಟ್ಟ ಹಾಗೂ ವಿಷಯ ಮಂಡನೆಯ ವೈಖರಿ ಅಭೂತಪೂರ್ವವಾದದ್ದು,” ಎಂದು ಹರ್ಷ ವ್ಯಕ್ತಪಡಿಸಿದರು.






























