
ಬೆಂಗಳೂರು,ಅ.27- ಭಾರಿ ಕುತೂಹಲ ಮೂಡಿಸಿದ್ದ ವಿಧಾನಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ್ ಗೆಲುವು ಸಾಧಿಸಿದ್ದಾರೆ.
ಸತತ ಐದು ಬಾರಿ ಗೆಲುವು ದಾಖಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಈ ಬಾರಿ ಸೋಲು ಕಂಡಿದ್ದಾರೆ. ಈ ಮೂಲಕ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.
ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ 908 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಂಗನಾಥ್ ಅವರು ಒಟ್ಟು 10,810 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 9,902 ಮತಗಳನ್ನು ಗಳಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 27,405 ಮತದಾರರಿದ್ದು, ಈ ಪೈಕಿ 22,468 ಮತಗಳು ಚಲಾವಣೆಯಾಗಿದ್ದವು. ಚಲಾವಣೆಯಾದ ಮತಗಳಲ್ಲಿ 20,611 ಮತಗಳು ಸಿಂಧುವಾಗಿದ್ದು, 1,857 ಮತಗಳು ಅಸಿಂಧುವಾಗಿವೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಅವರು ಗೆಲುವು ಸಾಧಿಸಿದ್ದಾರೆ. ಅಕ್ಟೋಬರ್ 23 ರಂದು ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಒಟ್ಟು 27,405 ಮತದಾರರ ಪೈಕಿ 22,468 ಮಂದಿ ಮತ ಚಲಾಯಿಸಿದ್ದು, ಶೇ.81.98ರಷ್ಟು ಮತದಾನವಾಗಿತ್ತು.
ಮತ ಚಲಾಯಿಸಿದವರಲ್ಲಿ 8,360 ಪುರುಷರು ಹಾಗೂ 14,108 ಮಹಿಳೆಯರಿದ್ದರು. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಅವರು ಗೆಲುವು ಸಾಧಿಸಿದ್ದಾರೆ. ಮತ ಎಣಿಕೆಯ ವಿವಿಧ ಸುತ್ತುಗಳಲ್ಲಿ ಎ.ಪಿ. ರಂಗನಾಥ್ ಮುನ್ನಡೆ ಕಾಯ್ದುಕೊಂಡಿದ್ದು, ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ.
ಕೊನೆಯ ಸುತ್ತಿನ ಮತ ಎಣಿಕೆಯಲ್ಲಿ ಎ.ಪಿ. ರಂಗನಾಥ್, 10810 ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ಪುಟ್ಟಣ್ಣ ಅವರು 9902 ಮತಗಳನ್ನು ಪಡೆದಿದ್ದರು. ಈ ಸುತ್ತಿನಲ್ಲಿ ರಂಗನಾಥ್ ಅವರು 908 ಮತಗಳ ಮುನ್ನಡೆ ಸಾಧಿಸಿದ್ದರು.
ಇತರ ಅಭ್ಯರ್ಥಿಗಳ ಪೈಕಿ ಕರ್ನಾಟಕ ರಾಷ್ಟ್ರ ಸಮಿತಿಯ ಅಭ್ಯರ್ಥಿಯಾದ ಡಾ. ಜಿ.ಆರ್. ಹೆಬ್ಬೂರು 94 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಉಮೇಶ್ ಬಾಬು ಪಿಳ್ಳೆಗೌಡ 215 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಬಿ .ಎಸ್. ನಾಗರಾಜು 11 ಹಾಗೂ ಪಕ್ಷೇತರ ಅಭ್ಯರ್ಥಿಯಾದ ಡಾ. ಎನ್. ಲಕ್ಷ್ಮಣ ಸ್ವಾಮಿ ಅವರು 24 ಮತಗಳನ್ನು ಪಡೆದಿದ್ದಾರೆ.
ಒಟ್ಟು 20616 ಮತಗಳು ಮಾನ್ಯವಾಗಿದ್ದು, 1857 ಮತಗಳು ತಿರಸ್ಕೃತಗೊಂಡಿದೆ ಎಂದು ತಿಳಿಸಿದರು.
ಬಿಜೆಪಿ-ಜೆಡಿಎಸ್ ಹರ್ಷ:
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಗೆಲುವು ಸಾಧಿಸಿರುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಂಗನಾಥ್ ಅವರಿಗೆ ಅಭಿನಂದನೆ ಸಲ್ಲಿಸಿದೆ.
2026ರ ಕರ್ನಾಟಕ ವಿಧಾನಪರಿಷತ್ ಚುನಾವಣೆಯ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪ್ರಚಂಡ ಗೆಲುವು ದಾಖಲಿಸಿದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಜೆಡಿಎಸ್ ತಿಳಿಸಿದೆ.
ರಂಗನಾಥ್ ಅವರ ಮೇಲೆ ವಿಶ್ವಾಸವಿಟ್ಟು, ಶಿಕ್ಷಕರ ಹಿತರಕ್ಷಣೆ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಮತ ಚಲಾಯಿಸಿದ ಶಿಕ್ಷಕರು ಮತ್ತು ಅಧ್ಯಾಪಕರಿಗೆ ಧನ್ಯವಾದ ಸಲ್ಲಿಸಿದೆ. ಅಲ್ಲದೆ, ಈ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸಿದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ, ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ವ್ಯಕ್ತಪಡಿಸಿದೆ.






















