Home ಜಿಲ್ಲೆ ಬೆಂಗಳೂರು ಶೃಂಗೇರಿ ಶಂಕರಮಠದಲ್ಲಿ ಸೀತಾರಾಮ ಕಲ್ಯಾಣೋತ್ಸವ

ಶೃಂಗೇರಿ ಶಂಕರಮಠದಲ್ಲಿ ಸೀತಾರಾಮ ಕಲ್ಯಾಣೋತ್ಸವ

ಕೋಲಾರ,ಜೂ,೧೫- ಕೋಲಾರ ಶೃಂಗೇರಿ ಶ್ರೀಶಂಕರ ಮಠದಲ್ಲಿ ಸೀತಾರಾಮ ಕಲ್ಯಾಣ ಮಹೋತ್ಸವ, ಶ್ರೀರಾಮ ಪಟ್ಟಾಭಿಷೇಕ ಹಾಗೂ ರಾಮ ತಾರಕ ಹೋಮ ನಡೆದಿದ್ದು, ಗೋಪೂಜೆಯೊಂದಿಗೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು, ೫೦೦ಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸಿದ್ದರು.


ಕೋಲಾರ ಶೃಂಗೇರಿ ಶ್ರೀಶಂಕರ ಮಠ ಹಾಗೂ ಶ್ರೀಶಂಕರ ಸೇವಾ ಟ್ರಸ್ಟ್, ಕೋಟೆ, ಕೋಲಾರ ಇವರ ವತಿಯಿಂದ ಅಧಿಕ ಮಾಸದ ಪ್ರಯುಕ್ತ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ, ಶ್ರೀರಾಮ ಪಟ್ಟಾಭಿಷೇಕ ಮತ್ತು ಶ್ರೀರಾಮ ತಾರಕ ಹೋಮ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಆಯೋಜಿಸಲಾಗಿತ್ತು.


ಅದ್ದೂರಿ ಮೆರವಣಿಗೆ ಹಾಗೂ ಭಜನಾ ತಂಡಗಳ ಗಾಯನ,ಕೋಲಾಟದೊಂದಿಗೆ ಶ್ರೀರಾಮನ ಮೂರ್ತಿಯನ್ನು ಹೊತ್ತು ತಂದು ನಂತರ ಸೀತಾರಾಮ ಕಲ್ಯಾಣೋತ್ಸವ ನಡೆಸಲಾಯಿತು. ಶ್ರೀರಾಮಚಂದ್ರ ಸ್ವಾಮಿಗೆ ವಿಶೇಷ ಪೂಜೆ ನಡೆಸಲಾಯಿತು.


ದಕ್ಷಿಣಾಮ್ನಾಯ ಶ್ರೀಶಾರದಾ ಪೀಠದ ಪರಮಪೂಜ್ಯ ಉಭಯ ಜಗದ್ಗುರುಗಳ ಪರಮಾನುಗ್ರಹ ಹಾಗೂ ಅವನೀ ಶ್ರೀಶಂಕರ ಮಠದ ಪೂಜ್ಯ ಸ್ವಾಮಿಗಳ ಆಶೀರ್ವಾದದೊಂದಿಗೆ ನಡೆಯುತ್ತಿರುವ ರಾಮ ತಾರಕ ಮಹಾಮಂತ್ರ ಜಪ ಯಜ್ಞದ ಮಂಗಳಾಚರಣೆಯ ಅಂಗವಾಗಿ ಈ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.


ಸಂಜೆ ನಡೆದ ಶ್ರೀಸೀತಾರಾಮ ಕಲ್ಯಾಣೋತ್ಸವದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದು, ಭಾನುವಾರ ಜಗದ್ಗುರುಗಳ ಸನ್ನಿಧಿಯಲ್ಲಿ ರುದ್ರಾಭಿಷೇಕ, ಶ್ರೀರಾಮ ತಾರಕ ಹೋಮ, ಶ್ರೀರಾಮ ಪಟ್ಟಾಭಿಷೇಕ ಹಾಗೂ ಮಹಾನೀರಾಜನ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.


ಆಗಮಿಕರಾಗಿ ಹಿಂದೂಪುರದ ಸುನೀಲ್ ಶರ್ಮ, ಅಪ್ಪಣ್ಣಶಾಸ್ತ್ರಿಗಳು, ಸುರೇಶ್, ಗಣೇಶ್, ವೆಂಕಟೇಶ್ ಶಾಸ್ತ್ರಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಕಾರ್ಯಕ್ರಮದಲ್ಲಿ ಶ್ರೀಶಂಕರ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಎಂ. ವಿ. ಜಯರಾಮ್ ಹಾಗೂ ಕೋಲಾರ ಶೃಂಗೇರಿ ಶ್ರೀಶಂಕರ ಮಠದ ಧರ್ಮಾಧಿಕಾರಿ ಜೆ. ಎನ್. ರಾಮಕೃಷ್ಣ, ಹಿರಿಯರಾದ ಅಪ್ಪಣ್ಣಶಾಸ್ತ್ರಿಗಳು, ವೆಂಕಟೇಶ್, ಶಂಕರಮಠದ ಪದಾಧಿಕಾರಿಗಳಾದ ಉದಯಕುಮಾರ್, ಸಿ.ಪಿ.ವಿಷ್ಣು, ಶ್ರೀವತ್ಸ, ವರುಣ್, ಹೆಚ್.ಕೆ.ಉಮೇಶ್, ಎಂ.ಪಿ. ಆನಂದ್, ಜಗದೀಶ್, ಶ್ರೀಕಂಠನ್, ಮುರಳಿಸುಂದರ್ ಮತ್ತು ಟ್ರಸ್ಟಿಗಳು ಹಾಜರಿದ್ದರು.