Home ಜಿಲ್ಲೆ ಕಲಬುರಗಿ ಬೀದಿ ವ್ಯಾಪಾರಿಗಳ 7 ವಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಅ.9ರಂದು ಪಾಲಿಕೆಗೆ ಮುತ್ತಿಗೆ: ಜಗನ್ನಾಥ...

ಬೀದಿ ವ್ಯಾಪಾರಿಗಳ 7 ವಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಅ.9ರಂದು ಪಾಲಿಕೆಗೆ ಮುತ್ತಿಗೆ: ಜಗನ್ನಾಥ ಸೂರ್ಯವಂಶಿ

ಕಲಬುರಗಿ, ಅ.7- ಮಹಾನಗರದ 3 ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ 7 ಝನಲ್ ಗಳನ್ನು ಗುರುತಿಸಲಾಗಿದ್ದರೂ ಅಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಭ ದೋರಣೆಯನ್ನು ಖಂಡಿಸಿ ಅ.9ರಂದು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಬೀದಿ ವ್ಯಾಪಾರಿಗಳ ಬೇಡಿಕೆಗೆ ಆಗ್ರಹಿಸಿ ವಿವಿಧ ಹಂತಗಳ ಹೋರಾಟ ಮತ್ತು ಕಾನೂನು ಹೋರಾಟ ಕೈಗೊಂಡರೂ ಕ್ಯಾರೆ ಅನ್ನದ ಪಾಲಿಕೆಯ ದೋರಣೆಯನ್ನು ಖಂಡಿಸಿ ಅ.9ರಂದು ಬೆಳಿಗ್ಗೆ 11 ಗಂಟೆಗ ನಗರದ ಜಗತ್ ವೃತ್ತದಿಂದ ಪಾಲಿಕೆಯ ವರೆಗೂ ಬೃಹತ ಪ್ರತಿಭಟನಾ ರ್ಯಾಲಿ ಮೂಲಕ ತೆರಳಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಬೀದಿಬದಿ ವ್ಯಾಪರಸ್ಥರು ಸೇರಿಕೊಂಡು ಮಾಹನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದರು.
ನಗರದ ಸರ್ಕಾರಿ ಐಟಿಐ ಕಾಲೇಜು ಎದುರು- ಎಂಎಸ್‍ಕೆ ಮಿಲ್ ರಸ್ತೆ, ಡಂಕಾ ವೃತ್ತದಿಂದ -ಪಾಕಿಜಾ ವೈನ್ ರಸ್ತೆ, ಕೆ.ಎಂ.ಎಫ್. ಡೈರಿ ಎದುರುಗಡೆ, ಅಣಕಲ್ ಪೆಟ್ರೋಲಬಂಕ್ ಎದುರು, ಹಳೆ ಜೇವರ್ಗಿ ರೈಲ್ವೆ ಕೆಳ ಸೇತುವೆ ರಸ್ತೆ, ಆಳಂದ ಚೆಕ್ ಪೋಸ್ಟ್ ರಸ್ತೆ ಮತ್ತು ಸುಪರ ಮಾರುಕಟ್ಟೆ ಈ 7 ವಲಯ ಗಳಲ್ಲಿ ಬೀದಿಬದಿ ವ್ಯಾಪಾರಗಳನ್ನು ಕೈಗೊಳ್ಳಲು ಕಳೆದ 2015 ರಲ್ಲಿ ಅಂದಿನ ಪಾಲಿಕೆ ಆಯುಕ್ತರಾದ ಎಸ್.ಬಿ.ಕಟ್ಟಿಮನಿ ಅವರು, ಬೀದಿವ್ಯಾಪಾರಸ್ಥರ ಅಧಿನಿಯಮ-2014ರಂತೆ ಕ್ರಮ ಕೈಗೊಂಡಿದ್ದರು. ಆದರೇ ಇಲ್ಲಿಯವರೆಗೂ ಬೀದಿಬದಿ ವಲಯ ಮಾರುಕಟ್ಟೆಗಳನ್ನು ನಿರ್ಮಿಸಿ ಅಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಲ್ಲಿ ಪಾಲಿಕೆ ಸಂಪೂರ್ಣ ವಿಫಲಗೊಂಡಿದೆ ಎಂದರು.
ಬೀದಿಬದಿ ವ್ಯಾಪಾರಸ್ಥರ ಬೆಂಬಲ ಉಪಘಟಕದಡಿ ಅಭಿವೃದ್ಧಿಗೆ ಕಳೆದ 2017-18ರಲ್ಲಿ 50 ಲಕ್ಷ ರೂ.ಗಳನ್ನು ಮೀಸಲಿಟ್ಟರೂ ಆ ಹಣವನ್ನು ಖರ್ಚು ಮಾಡಿಲ್ಲ. ಬೀದಿವ್ಯಾಪಾರಸ್ಥರ ಕಲ್ಯಾಣ ಯೋಜನೆಗಳು ಸಹ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಸಂಘವೂ ಕೈಗೊಂಡ ಕಾನೂನು ಹೋರಾಟದಲ್ಲಿ ಬೀದಿವ್ಯಾಪಾರಿಗಳ ಪರ ಆದೇಶ ಬಂದಿದ್ದರೂ ಅದನ್ನು ಜಾರಿ ಮಾಡುವಲ್ಲಿಯೂ ಪಾಲಿಕೆ ವಿಫಲವಾಗಿದೆ. ಒಟ್ಟಾರೆಯಾಗಿ ಬೀದಿಬದಿ ವ್ಯಾಪಾರಿಗಳಿಗೆ ಆಗುತ್ತಿರುವ ಅನ್ಯಾಯನ್ನು ಖಂಡಿಸಿ ಮತ್ತು ವಿವಿಧ ಬೇಡಿಕೆಗೆ ಒತ್ತಾಯಿಸಿ ಅ.11ರಂದು ನಡೆಯುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿವ್ಯಾಪಾರಿಗಳು ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಬೀದಿಬದಿ ವ್ಯಾಪಾರಿಗಳು ಹಬ್ಬ ಹರಿದಿನಗಳಲ್ಲಿ ಮಾತ್ರ ಒಂದಿಷ್ಟು ಹಣ ಸಂಪಾದಿಸಲು ಅವಕಾಶ ಇರುತ್ತದೆ ಹೀಗಾಗಿ ಅವರ ವ್ಯಾಪಾರಕ್ಕೆ ಅಡೆತಡೆ ಮಾಡದೇ ಮುಕ್ತ ಅವಕಾಶ ಕಲ್ಪಿಸಬೇಕು
ಬರಲಿರುವ ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ತಮ್ಮ ವ್ಯಾಪಾರವನ್ನು ಮುಕ್ತವಾಗಿ ನಡೆಸಲು ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಪೊಲೀಸ ಇಲಾಖೆ ಬೀದಿ ವ್ಯಾಪಾರಿಗಳಿಗಾಗಿ ಸ್ಥಳಗಳನ್ನು ಗುರುತಿಸಿ ಮಾರ್ಕ್ ಮಾಡಿಕೊಡಬೇಕು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಿಂದೂ ಮತ್ತು ಮುಸ್ಲೀಮರ ಹಬ್ಬ ಹರಿದಿನಗಳಲ್ಲಿ ಮಹಾನಗರದ ಕಿರಾಣ ಬಜಾರ, ಕಪಡ ಬಜಾರ, ಚಪ್ಪಲ ಬಜಾರ, ಬಂಡೆಬಜಾರ ಸೇರಿದಂತೆ ಸುಪರ ಮಾರುಕಟ್ಟೆಯಲ್ಲಿರುವ ಎಲ್ಲ ವ್ಯಾಪಾರ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಅಡ್ಡಿಪಡಿಸಬಾರದು.
ಸಾರ್ವಜನಿಕರಿಗೆ ಮತ್ತು ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ದಸರಾ ಹಬ್ಬದಿಂದ ದೀಪಾವಳಿ ಹಬ್ಬ ಮುಗಿಯುವವರೆಗೂ ಬೀದಿಬದಿಯ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಯಾವುದೇ ಕಾರಣಕ್ಕೂ ಅವರನ್ನು ಬೆರೆಕಡೆ ಸ್ಥಳಾಂತರಿಸಬಾರದು.
ಮಹಾನಗರದ ಝುನಲ್ ಬೀದಿವ್ಯಾಪಾರಿಗಳ ಮಾರುಕಟ್ಟೆಗಳು ಅಭಿವೃದ್ದಿ ಪಡಿಸುವವರೆಗೂ ಹಾಗೂ ಹಬ್ಬ ಹರಿದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಮಾತ್ರ ಬೀದಿವ್ಯಾಪಾರಿಗಳನ್ನು ತಾತ್ಕಾಲಿಕವಾಗಿ ಚೌಪಾಡಿಯಲ್ಲಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂಬ ಪ್ರಮುಖ ಬೇಡಿಕೆಯ ಮನವಿಯನ್ನು ಸಲ್ಲಿಸಲಾಗುವುದು.