Home ಜಿಲ್ಲೆ ಶ್ರೀದತ್ತ ಇಂಡಿಯಾ ಸಕ್ಕರೆ ಕಾರ್ಖಾನೆ: ಅ.15 ರೊಳಗೆ ಕಬ್ಬು ನುರಿಸುವಿಕೆ ಆರಂಭ

ಶ್ರೀದತ್ತ ಇಂಡಿಯಾ ಸಕ್ಕರೆ ಕಾರ್ಖಾನೆ: ಅ.15 ರೊಳಗೆ ಕಬ್ಬು ನುರಿಸುವಿಕೆ ಆರಂಭ

ಚಡಚಣ/ಹಾವಿನಾಳ,ಸೆ 25: ಹಾವಿನಾಳದ ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಿದ್ಧತೆ ಪೂರ್ಣಗೊಂಡಿದ್ದು, ಅಕ್ಟೋಬರ್ 15ರೊಳಗೆ ಕಬ್ಬು ನುರಿಸುವಿಕೆ ಆರಂಭಿಸಲಾಗುವುದು. ಪ್ರಸಕ್ತ ಹಂಗಾಮಿನಲ್ಲಿ 7 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆಯ ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ ಹೇಳಿದರು.
ಕಾರ್ಖಾನೆ ಆವರಣದಲ್ಲಿ ಸೋಮವಾರ ನಡೆದ 2026-27ನೇ ಸಾಲಿನ ಬಾಯ್ಲರ್ ಅಗ್ನಿ ಪ್ರದೀಪನ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಕಬ್ಬು ನುರಿಸುವ ಹಂಗಾಮು ಆರಂಭಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕಬ್ಬಿನ ನೋಂದಣಿ ಪ್ರಕ್ರಿಯೆ, ಕಬ್ಬು ಕಟಾವು ಹಾಗೂ ಸಾಗಾಣಿಕೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದ್ದು, ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ತಿ ಕಾರ್ಯವೂ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಕಾರ್ಖಾನೆಯ ಕಾರ್ಯಕ್ಷೇತ್ರದ ವ್ಯಾಪ್ತಿಯ ರೈತರು ತಾವು ಬೆಳೆದ ಕಬ್ಬನ್ನು ಕಾರ್ಖಾನೆಗೆ ಪೂರೈಸುವ ಮೂಲಕ ಸಹಕರಿಸಬೇಕು. ಕಬ್ಬು ಬೆಳೆಗಾರರು ಹಾಗೂ ಕಟಾವುಸಾಗಾಣಿಕೆದಾರರಿಗೆ ಸಂಬಂಧಿಸಿದ ಬಿಲ್‍ಗಳನ್ನು ನಿಗದಿತ ಸಮಯದಲ್ಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೃತ್ಯುಂಜಯ ಶಿಂಧೆ ಭರವಸೆ ನೀಡಿದರು.
ಕಾರ್ಖಾನೆಯ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಕ್ಕೂ ಮುನ್ನ ಸಂಪ್ರದಾಯದಂತೆ ಬಾಯ್ಲರ್ ಪೂಜೆ ಹಾಗೂ ಅಗ್ನಿ ಪ್ರದೀಪನ ಕಾರ್ಯಕ್ರಮ ಕಂಪನಿಯ ಸಂಚಾಲಕ ಚೇತನ ಧಾರು ಅವರಿಂದ ಪೂಜೆ ನೆರವೇರಿತು. ಬಾಯ್ಲರ್‍ನ ಹೋಮ ಯಜ್ಞ ಪೂಜೆಯನ್ನು ಕಾರ್ಖಾನೆಯ ಅಸಿಸ್ಟೆಂಟ್ ಎಂಜಿನಿಯರ್ ರೋಹಿತ್ ಪಾಟೀಲ ಹಾಗೂ ಅವರ ಧರ್ಮಪತ್ನಿ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಶಿಶರ್ ಬ್ಯಾಂಕ್‍ನ ಸಂಚಾಲಕ ಅವಿನಾಶ ಮಹಾಗವಕರ್, ಅಧಿಕಾರಿಗಳಾದ ಭರತ ತಾವರೆ, ರವೀಂದ್ರ ಗಾಯಕವಾಡ, ರವಿರಾಜ ಭೋಸಲೆ, ವೆಂಕಟೇಶ ರಾವ್, ಜಿತೇಂದ್ರ ಮೆಟಕರಿ, ಅನಿರುದ್ಧ ಪಾಟೀಲ, ವಿಜಯ ಹತ್ತೂರೆ, ರವೀಂದ್ರ ಬಿರಾಜದಾರ, ಸಂಗ್ರಾಮ್ ಸೂರ್ಯವಂಶಿ, ಸಚಿನ್ ನಿಕ್ಕಮ್, ಧನಂಜಯ ಪಾಟೀಲ, ವಿನಾಯಕ ಪೂಜಾರಿ, ಚಂದ್ರಕಾಂತ ಬಿರಾಜದಾರ, ಸಾವಕಾರ ಕೂಳಕರ ಸೇರಿದಂತೆ ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿ, ಕಬ್ಬು ಬೆಳೆಗಾರ ರೈತರು ಹಾಗೂ ಹಿತಚಿಂತಕರು ಉಪಸ್ಥಿತರಿದ್ದರು.