
ವಿಜಯಪುರ, ಆ.31: ನಮ್ಮ ಬದುಕಿನಲ್ಲಿ ಸಾಕಷ್ಟು ರೀತಿಯ ಸಂಪ್ರದಾಯ, ಪರಂಪರೆ, ಪದ್ಧತಿ, ರೀತಿ-ನೀತಿಗಳನ್ನು ಆಚರಿಸುತ್ತೇವೆ. ಹಿರಿಯರು ಹಾಗೂ ಪೂರ್ವಜರನ್ನು ದತ್ತಿಗೋಷ್ಠಿಗಳ ಮೂಲಕ ಪ್ರತಿವರ್ಷ ಸ್ಮರಿಸುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯವಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ಸಿಕ್ಯಾಬ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ರಸ್ತೆಯ ಗಾಂಧಿ ಭವನದಲ್ಲಿ ಭಾನುವಾರ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಶಮಶುದ್ದೀನ್ ಪಟೇಲ್ ಹಸನಪಟೇಲ್ ಪಾಟೀಲ (ಗಣಿಹಾರ) ದತ್ತಿ, ಶ್ರೀ ರಾವುತಪ್ಪ ಕೂಡಗಿ ದತ್ತಿ ಹಾಗೂ ಸಾಹಸಸಿಂಹ ಡಾ. ವಿಷ್ಣುವರ್ಧನ ಸ್ಮರಣಾರ್ಥ ದತ್ತಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು-ನುಡಿ, ನೆಲ-ಜಲ ಹಾಗೂ ಭಾಷೆ-ಭಾವನೆಗಳನ್ನು ಗೌರವಿಸಿ, ಸಾಹಿತ್ಯದ ಕಂಪನ್ನು ಎಲ್ಲೆಡೆ ಪಸರಿಸುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ನಿಜಕ್ಕೂ ಶ್ಲಾಘನೀಯ. ಶಮಶುದ್ದೀನ್ ಪಟೇಲ್ ಪಾಟೀಲ ಅವರ ಸ್ಮರಣಾರ್ಥ ಶ್ರಾವಣ ಮಾಸದ ನಿಮಿತ್ತ ವಿಶೇಷ ಕವಿಗೋಷ್ಠಿ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುದ್ದೇಬಿಹಾಳ ತಾಲೂಕು ಕಸಾಪ ಘಟಕದ ನಿಕಟಪೂರ್ವ ಅಧ್ಯಕ್ಷ ಎಂ.ಬಿ. ನಾವದಗಿ ಮಾತನಾಡಿ, ಸಾಹಿತ್ಯ ನಿಂತ ನೀರಲ್ಲ, ಅದು ಸದಾ ಹರಿಯುತ್ತಿರುತ್ತದೆ ಎಂಬ ಮಾತಿನಂತೆ ಕಳೆದ ಐದು ವರ್ಷಗಳಿಂದ ಹಾಸಿಂಪೀರ ವಾಲೀಕಾರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಾದ್ಯಂತ ಸಾಹಿತ್ಯ ಸಮ್ಮೇಳನಗಳು, ಕವಿಗೋಷ್ಠಿಗಳು ಹಾಗೂ ಅರ್ಥಪೂರ್ಣ ಉಪನ್ಯಾಸಗಳನ್ನು ಆಯೋಜಿಸುವ ಮೂಲಕ ಕನ್ನಡ ನಾಡಿನ ಗಮನ ಸೆಳೆದಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಜಿ. ಮುಚ್ಚಂಡಿ ಅವರು ಶ್ರಾವಣ ಮಾಸದ ಕವಿಗೋಷ್ಠಿ ಆಯೋಜಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಭಿನಂದನೆ ಸಲ್ಲಿಸಿದರು. ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸ ಅತ್ಯಂತ ಪವಿತ್ರ ಹಾಗೂ ಮಂಗಳಕರವಾಗಿದ್ದು, ಶಿವನಿಗೆ ಅತ್ಯಂತ ಪ್ರಿಯವಾದ ಮಾಸವಾಗಿದೆ. ಸಮುದ್ರಮಂಥನದ ಸಂದರ್ಭದಲ್ಲಿ ಶಿವನು ವಿಷವನ್ನು ಸೇವಿಸಿ ಜಗತ್ತನ್ನು ರಕ್ಷಿಸಿದ ಘಟನೆ ನಡೆದದ್ದು ಶ್ರಾವಣ ಮಾಸದಲ್ಲೇ ಎಂದು ಹೇಳಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಗದೀಶ ಸಾಲಳ್ಳಿ ಮಾತನಾಡಿ, ಸೋಮವಾರ ಶಿವಪೂಜೆ, ಮಂಗಳವಾರ ಮಂಗಳಗೌರಿ ವ್ರತ, ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಹಾಗೂ ಶನಿವಾರ ಸಂಪತ್ ಶನಿವಾರ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳ ಮೂಲಕ ಶ್ರಾವಣ ಮಾಸ ತನ್ನದೇ ಆದ ಮಹತ್ವ ಪಡೆದಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂತೋಷ ಚನಗೊಂಡ, ರಾಜುಗೌಡ ಪಾಟೀಲ, ಮಡಿವಾಳಮ್ಮ ನಾಡಗೌಡ, ಅರ್ಜುನ ಶಿರೂರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎ.ಎಸ್. ಪಾಟೀಲ, ಮುದ್ದೇಬಿಹಾಳ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ. ನಾವದಗಿ, ವೀರೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂತೋಷ ಚನಗೊಂಡ ಹಾಗೂ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದ ಜಗದೀಶ ಸಾಲಳ್ಳಿ ಅವರನ್ನು ಸಾಹಿತ್ಯ ಪರಿಷತ್ತಿನ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕವಿಗೋಷ್ಠಿಯಲ್ಲಿ 25ಕ್ಕೂ ಹೆಚ್ಚು ಕವಿಗಳ ಕವನ ವಾಚನ
ಶ್ರಾವಣ ಮಾಸದ ವೈಶಿಷ್ಟ್ಯ ಕುರಿತು ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಶೋಭಾ ಮೇಡೇಗಾರ, ಕವಿತಾ ಕಲ್ಯಾಣಪ್ಪಗೋಳ, ರುದ್ರಮ ಗುಡ್ಡಪ್ಪಗೋಳ, ಪಾರ್ವತಿ ಸೊನ್ನದ, ಪರ್ವೀನ್ ಶೇಖ್, ಶಿವಲೀಲಾ ಕೋರಿ, ದ್ರಾಕ್ಷಾಯಿಣಿ ಬಾಗೇವಾಡಿ, ಶಿವಾಜಿ ಮೋರೆ, ಗೀತಾ ವೈದ್ಯ, ಶಾಂತಾ ಮೋಸಲಗಿ, ಅಂಬಿಕಾ ಕರಕಪ್ಪಗೋಳ, ಸಂಗಮೇಶ ಕರೇಪ್ಪಗೋಳ, ರೂಪಾ ರಾಜಪೂತ, ಸುಮಲತಾ ಗಡಿಯಪ್ಪನವರ, ರಜಿಯಾ ದಳವಾಯಿ, ಸುಜಾತಾ ಹ್ಯಾಳದ, ಶಾರದಾ ತೋಟದ, ಲಕ್ಷ್ಮೀ ತೊರವಿ, ಸವಿತಾ ಹಿಪ್ಪರಗಿ, ಶ್ರೀದೇವಿ ಗದಗಿಮಠ, ಸರೋಜನಿ ಮಾವಿನಮರ, ಶೋಭಾ ಬಡಿಗೇರ, ಮಲ್ಲಿಕಾರ್ಜುನ ಕೆಳಗಡೆ, ಮಿಲನ ಹೊಸಕೋಟಿ ಸೇರಿದಂತೆ 25ಕ್ಕೂ ಹೆಚ್ಚು ಕವಿಗಳು ಹಾಗೂ ಕವಯಿತ್ರಿಯರು ತಮ್ಮ ಕವನಗಳನ್ನು ವಾಚಿಸಿದರು.
ಸೈನಾಬಿ ಮಸಬಿನಾಳ ಪ್ರಾರ್ಥಿಸಿದರು. ರಿಯಾಜ್ ಪಿಂಜಾರ ಸ್ವಾಗತಿಸಿದರು. ಡಾ. ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಮೆಹತಾಬ್ ಕಾಗವಾಡ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಎ.ಎಂ. ಹಳ್ಳೂರ, ಜಿ.ಎಸ್. ಬಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಕೆ.ಎಸ್. ಹಣಮಾಣಿ, ಮಲ್ಲಿಕಾರ್ಜುನ ಕೆಳಗಡೆ, ಫಕೃದ್ದೀನ್ ಅಲಿ ಅಹ್ಮದ್ ಹಿರೇಕೊಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.






























