
ನವದೆಹಲಿ, ಜು.೨೭- ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ದೇಶದಾದ್ಯಂತ ನಡೆದ ಪ್ರತಿಭಟನೆಗಳನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಕ್ರಮಗಳನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು ಇಡೀ ವ್ಯವಸ್ಥೆ “ಕೊಲೆಗಡುಕನಂತೆ” ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಎಕೆ-೪೭ ರೈಫಲ್ ಬಳಸಿ ಗುಂಡು ಹಾರಿಸಲಾಗಿದೆ. ನೂರಾರು ವಿದ್ಯಾರ್ಥಿಗಳನ್ನು ಬಂಧಿಸಿ, ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂಬ ಸುದ್ಧಿಗಳು ಕೇಳಿಬರುತ್ತಿವೆ’ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ನೀಡಿರುವ ಆಶ್ವಾಸನೆಯನ್ನು ಪ್ರಶ್ನಿಸಿದ್ದಾರೆ.
‘ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದಿಲ್ಲ.’ ಎಲ್ಲರನ್ನೂ ಬಿಡುಗಡೆ ಮಾಡಲಾಗುತ್ತದೆ ಎಂಬ ನಿಮ್ಮ ಭರವಸೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ
‘ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ದಾಳಿ ನಡೆಸಲಾಗುತ್ತಿದೆ’ ಎಂದು ಕಿಡಿಕಾರಿರುವ ಅವರು, ಪ್ರಧಾನಿ ನರೇಂದ್ರ ‘ಮೋದಿ ಅವರು ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ
ದೆಹಲಿಯಲ್ಲಿ ಜುಲೈ ೨೦ರಂದು ನಡೆದ ‘ಸಂಸತ್ ಚಲೋ’ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಿ ದಾಳಿ ಮಾಡಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಕಾಂಗ್ರೆಸ್ ನಾಯಕ ರಾಹುಲ್, ಆ ವಿಚಾರವಾಗಿಯೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ಇಡೀ ವ್ಯವಸ್ಥೆಯು ವಿದ್ಯಾರ್ಥಿಗಳ ವಿರುದ್ಧ ಮಾರಕವಾಗಿದೆ ಎಂದು ಆರೋಪಿಸಿದ್ದಾರೆ.
ಪೇದೆ ಅಮಾನತು
ಬಿಹಾರದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಹೋರಾಟದ ವೇಳೆ ಗುಂಡು ಹಾರಿಸಿದ ಪೊಲೀಸ್ ಪೇದೆಯನ್ನು ಅಮಾನುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕಳೆದ ೨೫ ರಂದು ಸಿವಾನ್ ಜಿಲ್ಲೆಯಲ್ಲಿ ನಡೆದ ಬಿಹಾರ ಬಂದ್ ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಕಡೆ ಎಕೆ-೪೭ ರೈಫಲ್ ಹಿಡಿದು ಕಾನ್ಸ್‌ಟೇಬಲ್ ಗುಂಡು ಹಾರಿಸಿದ್ದ.ಪ್ರತಿಭಟನೆ ವೇಳೆ ಪೊಲೀಸರು ರಿವಾಲ್ವಾರ್ ಕೈಯಲ್ಲಿ ಹಿಡಿದು ಸಾಗಿರುವ ವಿಡಿಯೋಗಳು ಸಹ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಮಧ್ಯೆ ಪ್ರತಿಭಟನೆ ವೇಳೆ ಗಾಯಗೊಂಡಿದ್ದ ಮೂವರನ್ನು ಪಾಟ್ನಾದ ಜಯಪ್ರಭಾ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಅಲ್ಲದೆ,ಗಾಯಾಳುಗಳಲ್ಲಿ ೧೫ ವರ್ಷದ ಎಂಡಿ ಆರಿಫ್ ಎಂಬ ಬಾಲಕ ಸಹ ಸೇರಿದ್ದಾನೆ. ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ, ಪ್ರತಿಭಟನೆ ಸಮಯದಲ್ಲಿ ಅಂಗಡಿ ಮುಚ್ಚಿ ಮನೆಗೆ ಹಿಂತಿರುಗುತ್ತಿದ್ದಾಗ ಈತನ ಕುತ್ತಿಗೆಗೆ ಗುಂಡು ತಗುಲಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಗುಂಡನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಆತನ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.






























