
ಕಲಬುರಗಿ: ಚಿತ್ರಕಲಾವಿದರು ರಚಿಸುವ ಕಲಾಕೃತಿಗಳಲ್ಲಿ ಗಾಂಭೀರ್ಯತೆ ಬಹಳ ಮುಖ್ಯವಾಗುತ್ತದೆ. ವಿಜಯಕುಮಾರ್ ಎಸ್ ಅವರು ರಚಿಸಿ ಪ್ರದರ್ಶಿಸಿದ ಬಹುತೇಕ ಕಲಾಕೃತಿಗಳು ರಚನಾ ತಂತ್ರಗಾರಿಕೆ, ಕೌಶಲ್ಯ ಮತ್ತು ವಿಶಿಷ್ಠ ಮೈವಳಿಕೆಯಿಂದಿಗೆ ಅಚ್ಚುಕಟ್ಟುತನವನ್ನು ಕಾಣಬಹುದು ಎಂದು ಹಿರಿಯ ಚಿತ್ರಕಲಾವಿದ ಚಂದ್ರಹಾಸ ವ್ಹಾಯ್ ಜಾಲಿಹಾಳ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಧನಸಹಾಯ ಅಡಿಯಲ್ಲಿ ಓಂ ನಗರದ ಎಂ.ಬಿ. ಲೋಹಾರ್ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ ಯುವ ಚಿತ್ರಕಲಾವಿದ ವಿಜಯಕುಮಾರ್ ಎಸ್. ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪ್ರಿಯವಾದ ಕಲಾಕೃತಿಗಳನ್ನು ನಿರಂತರವಾಗಿ ರಚಿಸದೆ ಕಲಾವಿದನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಗಂಭೀರವಾದ ಮತ್ತು ಕಲಾತ್ಮಕವಾದ ಕಲಾಕೃತಿಗಳನ್ನು ರಚಿಸಿ ಕಲಾಕೃತಿಯ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಜನಸಾಮಾನ್ಯರು ಕೂಡ ಕಲಾಕೃತಿಗಳ ಪ್ರದರ್ಶನ ವೀಕ್ಷಿಸಲು ಆಗಮಿಸುವಂತಾಗಬೇಕು. ಕಲಬುರಗಿಯಲ್ಲಿ ಚಿತ್ರಕಲಾವಿದರ ಮತ್ತು ಕಲಾಪ್ರದರ್ಶನಗಳ ಕೊರತೆಯಿಲ್ಲ. ಆದರೆ, ಸಾಮಾನ್ಯ ವೀಕ್ಷಕರ, ಗ್ರಾಹಕರ ಕೊರತೆ ಎದ್ದು ಕಾಣುತ್ತಿದೆ ಎಂದರು.
ಕಲಬುರಗಿ ಜೆಸ್ಕಾಂನ ನಿವೃತ್ತ ಮುಖ್ಯ ಇಂಜಿನಿಯರ್ ಚಂದ್ರಶೇಖರ್ ಆರ್. ಡಿ. ಮಾತನಾಡಿ ಕಲಾಪ್ರದರ್ಶನಗಳು ನಿರಂತರವಾಗಿ ನಡೆಯುವುದರಿಂದ ಕಲಾವಿದರು ಮತ್ತು ನೋಡುಗರ ಮಧ್ಯೆ ಸಂಪರ್ಕ ಬೆಳೆಯುತ್ತದೆ. ಕಲಾವಿದರ ನೇರ ಪರಿಚಯ ಮತ್ತು ಅವರು ರಚಿಸಿದ ಕಲಾಕೃತಿಗಳ ಆಸ್ವಾದಿಸಿ, ಸೌಂದರ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರ ಮಾತನಾಡಿ ಯುವಚಿತ್ರಕಲಾವಿದ ವಿಜಯಕುಮಾರ್ ಅವರ ಕಲಾಕೃತಿಗಳಲ್ಲಿ ಚಲನಶೀಲತೆ, ಪ್ರಮಾಣ ಬದ್ಧತೆ, ನೆರಳು-ಬೆಳಕಿನ ನಿರ್ವಹಣೆಯೊಂದಿಗೆ ಪ್ರಯೋಗಶೀಲತೆ ಕಾಣಬಹುದು. ಇವರ ಕಲಾಕೃತಿಗಳಲ್ಲಿ ಗೂಳಿ, ಹಸು, ಮೀನು, ಕುದುರೆ ಮತ್ತು ಆನೆಗಳ ಆಕಾರಗಳನ್ನು ತಮ್ಮದೇ ಶೈಲಿಯಲ್ಲಿ ವಿಶಿಷ್ಟವಾಗಿ ಅಭಿವ್ಯಕ್ತಿಸಿದ್ದಾರೆ. ಪ್ರಾಚೀನ ಕಾಲದ ಕಲಾಕೃತಿಗಳಿಂದ ಹಿಡಿದು ಆಧುನಿಕ ಕಾಲದ ಕಲಾಕೃತಿಗಳ ವರೆಗೂ ಪ್ರಾಣಿಗಳ ಆಕಾರಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸಿರುವುದು ಸಾಮಾನ್ಯವಾಗಿದೆ ಎಂದರು.
ಚಿತ್ರಕಲಾವಿದ ಸೂರ್ಯಕಾಂತ್ ನಂದೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಾವಿದ ತಾನು ರಚಿಸಿದ ಕಲಾಕೃತಿಗಳ ಮೂಲಕ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಬೇಕು. ಕಲಾವಿದ ಒಂದು ಚಿತ್ರಕಲಾಕೃತಿ ರಚಿಸಲು ಸಾಕಷ್ಟು ಸಮಯ ಮತ್ತು ಆರ್ಥಿಕ ಖರ್ಚು ಅಗತ್ಯವಿದ್ದು, ಶ್ರೀಮಂತ ವರ್ಗದ ಜನರು ಚಿತ್ರಕಲಾಕೃತಿಗಳನ್ನು ಖರೀದಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು. ಯುವಕಲಾವಿದ ವಿಜಯಕುಮಾರ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾಪ್ರದರ್ಶನದ ಮೊದಲ ದಿನವೇ ಕಲಾಕೃತಿಯೊಂದು ಮಾರಾಟವಾಗಿರುವುದು ವಿಶೇಷ.
ಕಾರ್ಯಕ್ರಮದಲ್ಲಿ ಡಾ. ಪರಶುರಾಮ ಪಿ, ಡಾ. ಕೆ. ಎಂ. ಕುಮಾರಸ್ವಾಮಿ, ಕುಪೇಂದ್ರ, ಕವಿತಾ ಕಟ್ಟೆ, ಕಾವ್ಯ ಗಡ್ಡಿ, ಗರೀಶ್ ಕುಲಕರ್ಣಿ, ಶಂಕರಗೌಡ, ಶಶಿಕಾಂತ್ ಪಾಟೀಲ್, ರಾಮಗಿರಿ ಪೊಲೀಸ್ ಪಾಟೀಲ್, ಸುರೇಶ್, ಮಹೇಶ್, ಶಿವಶರಣ, ಗೋಪಾಲ್ ಕೆ.ಪಿ, ಸೇರಿದಂತೆ ಮುಂತಾದವರಿದ್ದರು. ಮಲ್ಲಿಕಾರ್ಜುನ ಮುಗಳಿ ಅತಿಥಿ ಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.






























