
ಚಿಕ್ಕನಾಯಕನಹಳ್ಳಿ, ಜು. ೧೮- ಆಕಸ್ಮಿಕವಾಗಿ ಚಾನಲ್ನಲ್ಲಿ ಮಣ್ಣು ಕುಸಿದ ಕಾರಣದಿಂದ ಜು. ೧೫ ರಂದು ನಿಗದಿ ಮಾಡಿದ್ದ ಚಾನಲ್ ವೀಕ್ಷಣೆಯನ್ನು ಜು. ೨೮ ರಂದು ಮಠಾಧೀಶರು, ರೈತರು, ಹೋರಾಟಗಾರರೊಂದಿಗೆ ವೀಕ್ಷಿಸಲಾಗುವುದು ಎಂದು ಶಾಸಕ ಸಿ.ಬಿ. ಸುರೇಶ್ಬಾಬು ತಿಳಿಸಿದರು.
ತಾಲ್ಲೂಕಿನ ಹೇಮಾವತಿ ನಾಲಾ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ರೈತರು ಉತ್ತಮ ರೀತಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ನೀರು, ವಿದ್ಯುತ್, ಸಂಪರ್ಕ ರಸ್ತೆಗಳು ಹಾಗೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕು. ಈ ನಿಟ್ಟಿನಲ್ಲಿ ನಮ್ಮ ತಾಲ್ಲೂಕಿನ ರೈತರಿಗಾಗಿ ಶೆಟ್ಟಿಕೆರೆ, ನವಿಲೆ ಕೆರೆ, ಕಂದಿಕೆರೆ ಭಾಗಕ್ಕೆ ಸೇರಿದಂತೆ ಹಲವಾರು ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸುವ ಕಾಮಗಾರಿಗೆ ೨೦೧೧ ರಲ್ಲೇ ಯೋಜನೆ ಸಿದ್ದಪಡಿಸಲಾಗಿತ್ತು ಎಂದರು.
ಅದರಂತೆ ಹೇಮಾವತಿ ನೀರಾವರಿಗಾಗಿ ತುಮಕೂರಿನ ಮುಖ್ಯ ಕೆನಾಲ್ನಿಂದ ಯಾವ ಮಾರ್ಗದಲ್ಲಿ ಚಾನಲ್ ಮಾಡಲಾಗುವುದು ಎಂಬುದರ ಬಗ್ಗೆ ಪಾದಯಾತ್ರೆ ಮೂಲಕ ಅಂದು ಕೆಂಪು ಬಾವುಟಗಳನ್ನು ಹಾಕಿ ಗುರುತು ಮಾಡಲಾಗಿತ್ತು. ಅದೇ ಮಾರ್ಗದಲ್ಲಿ ದಬ್ಬೇಘಟ್ಟ ಕೆರೆಯವರೆಗೆ ಚಾನಲ್ ಕೆಲಸ ಮಾಡಲಾಗಿದೆ. ಈ ಚಾನಲ್ ವೀಕ್ಷಣೆಯನ್ನು ಜು. ೧೫ ರಂದು ನಿಗದಿ ಮಾಡಲಾಗಿತ್ತು. ಅದರೆ ಆಕಸ್ಮಿಕವಾಗಿ ಚಾನಲ್ನಲ್ಲಿ ಮಣ್ಣು ಕುಸಿತಗೊಂಡಿದ್ದು ಅದನ್ನು ತೆರವು ಗೊಳಿಸಿ ಜು. ೨೮ ರಂದು ಎಲ್ಲ ಮಠಾದೀಶರು, ರೈತ ಮುಖಂಡರು, ಹೋರಾಟಗಾರರ ನೇತೃತ್ವದಲ್ಲಿ ವೀಕ್ಷಣೆ ಕಾರ್ಯಕ್ರಮವನ್ನು ಆಯೋಸಿದ್ದು ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ ಅವರು, ತಾಲ್ಲೂಕಿನಲ್ಲಿ ಶಾಶ್ವತ ನೀರನ್ನು ಒದಗಿಸುವಂತಹ ಕೆಲಸ ಮಾಡಲಾಗುತ್ತಿದ್ದು ಸಿಂಗದಹಳ್ಳಿ ಕೆರೆಗೆ ನೀರು ಹರಿಸುವುದು ಹಾಗೂ ಗಿಣಿ ವಜ್ರದಲ್ಲಿ ಒಂದು ಚೆಕ್ ಡ್ಯಾಂ ನಿರ್ಮಿಸಿ ರಾಮನಹಳ್ಳಿ, ತಿಮ್ಮನಹಳ್ಳಿ, ತೀರ್ಥಪುರ ಗ್ರಾಮ ಪಂಚಾಯ್ತಿಗಳಿಗೆ ಅನುಕೂಲವಾಗುವಂತಹ ಕಾಮಗಾರಿಗಳನ್ನು ಮಾಡಲಾಗುವುದು ಎಂದರು.


































