Home ಮುಖಪುಟ ಸುದ್ದಿ ಸರ್ಕಾರಿ ಆಸ್ಪತ್ರೆಗಳ ಕಾಂಪೌಂಡ್ ಗುಣಮಟ್ಟ ಪರಿಶೀಲನೆಗೆ ಆದೇಶ

ಸರ್ಕಾರಿ ಆಸ್ಪತ್ರೆಗಳ ಕಾಂಪೌಂಡ್ ಗುಣಮಟ್ಟ ಪರಿಶೀಲನೆಗೆ ಆದೇಶ

ಬೆಂಗಳೂರು: ಏ.೩೦-ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಸಂಭವಿಸಿದ ದುರಂತದಲ್ಲಿ ಏಳು ಜನರು ಮೃತಪಟ್ಟಿದ್ದಾರೆ ಎನ್ನುವ ಆರೋಪಗಳ ನಡುವೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಘಟನೆಗೆ ಕಾರಣವಾದ ತಾಂತ್ರಿಕ ಹಾಗೂ ಆಡಳಿತಾತ್ಮಕ ಎಡವಟ್ಟುಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.


ಆರು ವರ್ಷಗಳ ಹಿಂದೆ ವರೆಗೆ ಬೆಂಗಳೂರು ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೌರಿಂಗ್ ಆಸ್ಪತ್ರೆ, ಬಳಿಕ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಸ್ಥಾಪನೆಯಾದ ನಂತರ ಸ್ವತಂತ್ರ ಸಂಸ್ಥೆಯಾಗಿ ರೂಪುಗೊಂಡಿತ್ತು. ಸುಮಾರು ಆರು ವರ್ಷಗಳ ಹಿಂದೆ ಲೋಕಾರ್ಪಣೆಗೊಂಡ ಈ ಕಾಲೇಜಿನ ವ್ಯಾಪ್ತಿಯಲ್ಲಿ ನಿರ್ಮಾಣವಾದ ಹಳೆಯ ಮತ್ತು ಹೊಸ ತಡೆಗೋಡೆಗಳ ಗುಣಮಟ್ಟದ ಬಗ್ಗೆ ಇದೀಗ ಗಂಭೀರ ಅನುಮಾನಗಳು ವ್ಯಕ್ತವಾಗಿವೆ.


ಈ ಘಟನೆ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ತುರ್ತು ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳು, ಕಾಂಪೌಂಡ್ ಗೋಡೆಗಳು ಹಾಗೂ ಮೂಲಸೌಕರ್ಯಗಳ ಸಮಗ್ರ ಗುಣಮಟ್ಟ ಪರಿಶೀಲನೆಗೆ ಆದೇಶ ನೀಡಿದ್ದಾರೆ.

ಪರಿಶೀಲನೆಗೆ ಒಳಪಡುವ ಪ್ರಮುಖ ಆಸ್ಪತ್ರೆಗಳು:
ವಿಕ್ಟೋರಿಯಾ ಆಸ್ಪತ್ರೆ, ಕೆಸಿ ಜನರಲ್ ಆಸ್ಪತ್ರೆ, ಸಿ.ವಿ. ರಾಮನ್ ನಗರ ಆಸ್ಪತ್ರೆ ಇವುಗಳ ಜೊತೆಗೆ ನಗರದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ಈ ಆದೇಶ ಅನ್ವಯವಾಗಲಿದೆ. ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.


ಘಟನೆ ಬಳಿಕ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದ್ದು, ಸರ್ಕಾರಿ ಆಸ್ಪತ್ರೆಗಳ ನಿರ್ಮಾಣ ಗುಣಮಟ್ಟ, ನಿರ್ವಹಣೆ ಮತ್ತು ಮೇಲ್ವಿಚಾರಣೆಯ ಮೇಲೆ ಮತ್ತೆ ಪ್ರಶ್ನೆಗಳು ಎದ್ದಿವೆ. ಸರ್ಕಾರ ಕೈಗೊಂಡಿರುವ ಈ ಪರಿಶೀಲನೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ನಿರ್ಲಕ್ಷ್ಯಗಳನ್ನು ಬೆಳಕಿಗೆ ತರುವ ಸಾಧ್ಯತೆ ಇದೆ.