Home ಜಿಲ್ಲೆ ೩೧ರಂದು ಸರ್ದಾರ್ ಪಟೇಲ್ ಜಯಂತಿ,ಏಕತಾ ಪ್ರತಿಜ್ಞೆ

೩೧ರಂದು ಸರ್ದಾರ್ ಪಟೇಲ್ ಜಯಂತಿ,ಏಕತಾ ಪ್ರತಿಜ್ಞೆ

ಬೀದರ್: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ೧೫೨ನೇ ಜಯಂತಿ ಹಾಗೂ ೧೩ನೇ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಅಕ್ಟೋಬರ್ ೩೧ರಂದು ಬೀದರ್‌ನಲ್ಲಿ ರಾಷ್ಟ್ರೀಯ ಏಕತಾ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಭಾರತ ರತ್ನ ಪೂಜ್ಯ ಬಾಬಾಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರತಿಷ್ಠಾನವು ಕಳೆದ ೨೭ ವರ್ಷಗಳಿಂದ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ವೋದಯ ನ್ಯಾಸ್, ಭಾರತ ಸೇವಾದಳ, ಭಾರತ ಸಂರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸರ್ಕಾರಿ, ಅರೆ ಸರ್ಕಾರಿ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸರ್ದಾರ್ ಪಟೇಲರ ಜಯಂತಿ ಮತ್ತು ರಾಷ್ಟ್ರೀಯ ಏಕತಾ ಪ್ರತಿಜ್ಞೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಭಾರತದ ಏಕತೆ, ಅಖಂಡತೆ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಬಲಪಡಿಸುವ ಉದ್ದೇಶದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಹಾಲಿ ಮತ್ತು ಮಾಜಿ ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳು, ವ್ಯಾಪಾರಸ್ಥರು, ಯುವಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸರ್ದಾರ್ ವಲ್ಲಭಭಾಯಿ ಪಟೇಲರು ದೇಶದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಜಾತಿ, ಮತ, ಪಂಥ ಹಾಗೂ ಪಕ್ಷಭೇದ ಮರೆತು ಎಲ್ಲರೂ ರಾಷ್ಟ್ರೀಯ ಏಕತಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಶಿವಶರಣಪ್ಪ ವಾಲಿ ಮನವಿ ಮಾಡಿದ್ದಾರೆ.